ಕೋಟ: ಸಾಧಕರನ್ನು ಸಮಾಜ ಗುರುತಿಸುವಂತಾಗಬೇಕು, ಆಗ ತಾನೆ ಅವರು ಇನ್ನೊಬ್ಬರಿಗೆ ಮಾದರಿಯಾಗಿ ಸಮಾಜ ಮುಂದೆ ನಿಲ್ಲಲು ಸಾಧ್ಯ. ಕಾರಂತ ಥೀಮ್ ಪಾರ್ಕ್ನಲ್ಲಿ ದತ್ತಿ ಪುರಸ್ಕಾರದ ಮೂಲಕ ಸಾಧಕರನ್ನು ಗುರುತಿಸಿ ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಎಂದು ಸಾಂಸ್ಕೃತಿಕ ಚಿಂತಕ, ಉದ್ಯಮಿ ಶ್ರೀಕಾಂತ್ ಶೆಣೈ ಹೇಳಿದರು.
ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಯಕ್ಷಗಾನ ವಿಚಾರಗೋಷ್ಠಿ-ಯಕ್ಷಗಾನ ವೈಭವ ಕಾರ್ಯಕ್ರಮ ಒಡ್ಡೋಲಗ-2022(ನೆನಪಿನ ಕಾವಳ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಕ್ಷಗಾನ ಭಾಗವತ ಲಂಬೋದರ ಹೆಗಡೆ ಮಾತನಾಡಿ, ಯಕ್ಷಗಾನದ ಪರಂಪರೆ ಮರೆಯದಂತೆ ಯಕ್ಷಗಾನವನ್ನು ಪ್ರಸ್ತುತಪಡಿಸಬೇಕಾಗಿದೆ ಎಂದರು. ಯಕ್ಷಗಾನ ಸಂಘಟಕ ಪ್ರಸಾದ್ ಬಿಲ್ಲವ ಮಾತನಾಡಿ, ಪ್ರೇಕ್ಷಕರನ್ನು ಮನದಲ್ಲಿ ಇರಿಸಿಕೊಂಡು ಅವರ ಅಭಿರುಚಿಗೆ ತಕ್ಕಂತೆ ಯಕ್ಷಗಾನಕ್ಕೆ ಚ್ಯುತಿ ಬರದಂತೆ ಪ್ರದರ್ಶನ ನೀಡಬೇಕು ಎಂದರು.
ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಸಮಾಜ ಸೇವಕ ಸಂತೋಷ್ ಪೂಜಾರಿ ಕದ್ರಿಕಟ್ಟು, ಕಾರಂತ ಪ್ರತಿಷ್ಠಾನದ ಸದಸ್ಯ ಸುಬ್ರಾಯ್ ಆಚಾರ್ಯ ಉಪಸ್ಥಿತರಿದ್ದರು.
ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ನಿರೂಪಿಸಿದರು.