ಬೆಂಗಳೂರು: ನಾಳೆಯಿಂದ (ಜ. 17) ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಪೋರ್ಟಲ್ ಕಾರ್ಯಾರಂಭವಾಗಲಿದ್ದು, ಸೇರಲು ಇಚ್ಛಿಸುವವರು ಅರ್ಜಿಯನ್ನು ಹಾಕಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ಇಂದು ಸುದ್ಧಿಗಾರರ ಜೊತೆಗೆ ಮಾತನಾಡಿದ ಅವರು, 2002ರಿಂದ ಕೇವಲ ಎರಡು ಸಾವಿರ ವೇತನದಿಂದ ಆರಂಭವಾಗಿ 2007 ರಿಂದ 11 ಸಾವಿರ, 13 ಸಾವಿರ ಮಾಸಿಕ ವೇತನ ನೀಡಲಾಗುತ್ತಿದ್ದು ಇದೀಗ 32 ಸಾವಿರ, 30 ಸಾವಿರ, 28 ಸಾವಿರ, 26 ಸಾವಿರ ವೇತನವನ್ನು ನೀಡುವ ನಿರ್ಧಾರವನ್ನು ಸರಕಾರ ಕೈಗೊಂಡಿದೆ.
ಸರಿಸುಮಾರು 13 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಯುಜಿಸಿ ಅರ್ಹತೆ ಇರುವವರು 4500 ಮಂದಿ. 8-10 ಗಂಟೆ ಕಾರ್ಯಭಾರವನ್ನು 15 ಗಂಟೆಗಳಿಗೆ ಹೆಚ್ಚಿಸಲಾದ ಕಾರಣ ಅರ್ಹತೆ ಇರುವವರು ಮತ್ತು ಅರ್ಹತೆ ಇಲ್ಲದಿರುವ ಒಟ್ಟು 9500 ಕ್ಕಿಂತ ಹೆಚ್ಚು ಮಂದಿಯ ನೇಮಕಾತಿ ಆಗಲಿದೆ.
ಮಾಸಿಕ ವೇತನವನ್ನು ಎರಡೂವರೆ-ಮೂರು ಪಟ್ಟು ಹೆಚ್ಚಿಸಲಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಯುಜಿಸಿ ಅರ್ಹತೆ ಇರುವ ಉಪನ್ಯಾಸಕರು, ವೆಲ್ ಕ್ವಾಲಿಫೈಡ್ ಉಪನ್ಯಾಸಕರಿಗೆ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶ ಸರಕಾರದ ಮುಂದಿದೆ.
ಉತ್ತಮವಾಗಿ ಜೀವನ ನಡೆಸಲು ಅವಕಾಶ ಮಾಡಿ ಎಂಬ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಕಾರ್ಯಭಾರ ಇಲ್ಲದಿದ್ದರೆ ಎಲ್ಲರಿಗೆ ಅವಕಾಶ ಕೊಡಲು ಹೇಗೆ ಸಾಧ್ಯ? ನೇರ ನೇಮಕಾತಿಯಲ್ಲಿಯೇ ಭದ್ರತೆ. ಬೇರೆ ಯಾವುದೇ ಸೇವಾ ಭದ್ರತೆ ಕೊಡಲು ಆಗುವುದಿಲ್ಲ.
ಗುಣಮಟ್ಟದ ಬೋಧಕರು ಸೇವೆಗೆ ಬರಬೇಕು ಎಂಬ ಉದ್ದೇಶಕ್ಕಾಗಿಯೇ ಮುಖ್ಯ ಕಾರ್ಯದರ್ಶಿಗಳಿಗಿಂತ ಹೆಚ್ಚಿನ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸರಕಾರದ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವರು ರಾಜಕೀಯ ಮಾಡಲು ಇದನ್ನು ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ. ಸೋಮವಾರದಿಂದ ಪೋರ್ಟಲ್ ತೆರೆಯುತ್ತದೆ. ಸೇರಲು ಇಚ್ಛಿಸುವವರು ಸೇರಬಹುದು ಎಂದರು.
ಅತಿಥಿ ಉಪನ್ಯಾಸಕರ ವಿರೋಧ: ಅತಿಥಿ ಉಪನ್ಯಾಸಕರು ಸೇವಾ ಭದ್ರತೆ, ಸೇವಾ ವಿಲೀನ ಮಾಡಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಸರಕಾರದ ನಿರ್ಧಾರದಿಂದ ಹಲವಾರು ಮಂದಿ ಕಾರ್ಯಭಾರವಿಲ್ಲದೆ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಅತಿಥಿ ಉಪನ್ಯಾಸಕರ ಸಂಘಟನೆಗಳ ನಾಯಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.