ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕಳೆದ ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರಕಾರ ಕೊನೆಗೂ ಸಂಕ್ರಾಂತಿಯ ಬೇವು ಬೆಲ್ಲ ನೀಡಿದೆ.
ಇಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿಚ ಡಾ. ಅಶ್ವತ್ಥನಾರಾಯಣ ಅವರು ಸಮಿತಿಯ ವರದಿಯ ಆಧಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕೈಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ಯುಜಿಸಿ ಅರ್ಹತೆ ಇರುವ ಅತಿಥಿ ಉಪನ್ಯಾಸಕರಿಗೆ ಈ ಹಿಂದೆ 13 ಸಾವಿರ ನೀಡುತ್ತಿದ್ದು ಇನ್ನು ಮುಂದೆ ತಿಂಗಳಿಗೆ 32 ಸಾವಿರ ನೀಡಲಾಗುವುದು. ಯುಜಿಸಿ ಅರ್ಹತೆ ಇಲ್ಲದವರಿಗೆ 5 ವರ್ಷಕ್ಕಿಂತ ಹೆಚ್ಚಿನ ಅನುಭವ ಇರುವವರಿಗೆ 28 ಸಾವಿರ, 5 ವರ್ಷಕ್ಕಿಂತ ಕಡಿಮೆ ಅನುಭವ ಇರುವವರಿಗೆ 26 ಸಾವಿರ ನೀಡಲಾಗುವುದು.
ಯುಜಿಸಿ ಅರ್ಹತೆ ಇರುವವರು 5 ವರ್ಷಕ್ಕಿಂತ ಕಡಿಮೆ ಅನುಭವ ಇರುವವರಿಗೆ 30 ಸಾವಿರ ನೀಡಲಾಗುವುದು. ಈ ಹಿಂದೆ ಸೆಮಿಸ್ಟರ್ ಆಧಾರದಲ್ಲಿ ನೇಮಕಾತಿ ಆಗುತ್ತಿದ್ದು ಇನ್ನು ಮುಂದೆ ಶೈಕ್ಷಣಿಕ ವರ್ಷಕ್ಕೆ ನೇಮಕಾತಿ ಮಾಡಲಾಗುವುದು.
ಪ್ರತಿ ತಿಂಗಳು 10ನೇ ತಾರೀಕಿನ ಒಳಗೆ ವೇತನ ನೀಡಲಾಗುವುದು. ಪ್ರತಿ ವರ್ಷವೂ ಅರ್ಜಿ ಸಲ್ಲಿಸಬೇಕು. ಹೆಚ್ಚು ಕಾರ್ಯಭಾರವನ್ನು ಕೂಡ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದು ಸೋಮವಾರದಿಂದ (ಜ.17) ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.