ಹಾವೇರಿ: ಬ್ಯಾಂಕಿನಲ್ಲಿ ಸಾಲ ನೀಡಿಲ್ಲ ಎಂದು ಬ್ಯಾಂಕಿಗೆ ಬೆಂಕಿ ಹಾಕಿದವನನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಡೆದಿದೆ. ವಾಸಿಮ್ ಹಜರತಸಾಬ್ ಮುಲ್ಲಾನನ್ನು ಪೊಲೀಸರು ಬಂಧಿಸಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಏನಿದು ಘಟನೆ? ವಾಸಿಮ್ ಹಜರತಸಾಬ್ ಮುಲ್ಲಾ 33, ಹಾವೇರಿಯ ರಟ್ಟಿಹಳ್ಳಿಯ ನಿವಾಸಿಯಾಗಿದ್ದು ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಡಿಗೊಂಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದ. ಇವನ ಸಿಬಿಲ್ ಸ್ಕೋರ್ ಕಡಿಮೆಯಿದ್ದ ಕಾರಣ ಈತನಿಗೆ ಬ್ಯಾಂಕ್ ಸಾಲವನ್ನು ನಿರಾಕರಿಸಿತು.
ಇದರಿಂದ ಕುಪಿತಗೊಂಡ ವಾಸಿಮ್ ಹಜರತಸಾಬ್ ಮುಲ್ಲಾ ಶನಿವಾರ ರಾತ್ರಿ ಬ್ಯಾಂಕಿಗೆ ಬಂದು ಕಿಟಕಿಯ ಗಾಜು ಒಡೆದು ಪೆಟ್ರೋಲ್ ಸುರಿದು ಬೆಂಕಿ ಹಾಕಿದ.
ದಟ್ಟ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಗಮನಕ್ಕೆ ತಂದರು. ತಕ್ಷಣ ಸ್ಥಳಕ್ಕೆ ದೌಢಾಯಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆದರು. ಬೆಂಕಿ ಇಟ್ಟು ಜಾಗ ಖಾಲಿ ಮಾಡಲು ಯತ್ನಿಸಿದ ವಾಸಿಮ್ ನನ್ನು ಊರಿನವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕ್ಯಾಶ್ ಕೌಂಟರ್, ಕ್ಯಾಬಿನ್, ಸಿಸಿಟಿವಿ, ಐದು ಕಂಪ್ಯೂಟರ್, ಪಾಸ್ಬುಕ್, ಪ್ರಿಂಟರ್, ಕ್ಯಾಶ್ ಕೌಂಟಿಂಗ್ ಯಂತ್ರ, ಫ್ಯಾನ್, ಲೈಟ್, ಕಡತಗಳು, ಪೀಠೋಪಕರಣಗಳಿಗೆ ಹಾನಿಯಾಗಿದ್ದು ಒಟ್ಟು 12 ಲಕ್ಷಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.