ಕೋಟ: ಸಹಕಾರಿ ಕ್ಷೇತ್ರದಲ್ಲಿ ಕೋಟ ಕೃಷಿ ಪತ್ತಿನ ಸಹಕಾರಿ ವ್ಯವಸಾಯಕ ಸಂಘ ಜನೌಷಧ ಮಳಿಗೆ ಪ್ರಾರಂಭಿಸಿ ಹೊಸ ಭಾಷ್ಯ ಬರೆದಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಇದರ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಹೇಳಿದರು.
ಇಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ನೇತೃತ್ವದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಮಂತ್ರಿ ಜನೌಷಧ ಕೇಂದ್ರ ಮತ್ತು ಕೃಷಿ ಮಳಿಗೆ, ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಲ್ಲ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಸಹಕಾರಿ ರಂಗ ಜನೌಷಧ ಮಳಿಗೆ ಸ್ಥಾಪಿಸಿ ಜನಸಾಮಾನ್ಯರಿಗೆ ನೆರವಾಗುವ ಕಾರ್ಯಕ್ರಮ ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಷ್ಟೆ ಅಲ್ಲದೆ ರೈತರಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕೃಷಿ ಮಳಿಗೆ, ಕ್ರೆಡಿಟ್ ಕಾರ್ಡ್ ವಿತರಿಸುವ ಮೂಲಕ ಎಲ್ಲಾ ರಂಗದಲ್ಲೂ ಸೈ ಎನ್ನಿಸಿಕೊಂಡಿದೆ.
ಕೇಂದ ಮಾಜಿ ಸಚಿವರ ಚಿಂತನೆಯಂತೆ ಸಹಕಾರಿ ಕ್ಷೇತ್ರದಲ್ಲಿ ಜನೌಷಧ ಮಳಿಗೆ ತೆರೆದು ಬಡವರ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಔಷಧ ಸಿಗುವಂತೆ ಕಾರ್ಯಕ್ರಮ ರೂಪಿಸಿದ್ದಾರೆ ಇದು ಶ್ಲಾಘನೀಯ.
ಇಂದು ಸಹಕಾರಿ ರಂಗ ಮಂಚೂಣಿಗೆ ಬರಲು ಮಾಧ್ಯಮಗಳ ಪಾಲು ಅನನ್ಯವಾದದ್ದು ಎಂದರಲ್ಲದೆ ಸಹಕಾರಿ ರಂಗ ಸಾಲ ನೀಡುವುದಕ್ಕೆ ಸೀಮಿತಗೊಳ್ಳದೆ ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದೆ.
ಈ ದಿಸೆಯಲ್ಲಿ ನಿಮ್ಮ ಸಂಸ್ಥೆಯನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ರೈತ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ಸಹಕಾರಿ ಕ್ಷೇತ್ರ ನೀಡುತ್ತಿದೆ. ಈ ನಿಟ್ಟಿನಲ್ಲಿ ಅವಿಭಜಿತ ಜಿಲ್ಲೆಗಳಲ್ಲಿ ಒಂದೇ ಒಂದು ರೈತರು ಆತ್ಮಹತ್ಯೆಗೊಳಗಾಗಲಿಲ್ಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಹಾಗೂ ಕೃಷಿ ಮಳಿಗೆಯನ್ನು ಡಾ. ಎಮ್ ಎನ್ ರಾಜೇಂದ್ರ ಕುಮಾರ್ ಅನಾವರಣಗೊಳಿಸಿದರು.
ಕೋಟ ಸಹಕಾರಿ ವ್ಯವಸಾಯಕ ಬ್ಯಾಂಕ್ ನಲ್ಲಿ ಸಾಲ ಪಡೆದ ಸದಸ್ಯ ಮೃತಪಟ್ಟರೆ ಆತನ ಸಾಲದ ಮೊತ್ತದ ಶೇ.25 ರಷ್ಟು (ಗರಿಷ್ಠ 50 ಸಾವಿರ) ವಾರಿಸುದಾರರಿಗೆ ಬ್ಯಾಂಕ್ ಭರಿಸುವ ಯೋಜನೆ ಸದಸ್ಯ ಕಲ್ಯಾಣ ನಿಧಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಎಸ್.ಡಿ.ಸಿ.ಸಿ ಬ್ಯಾಂಕ್ ವಲಯ ಮೇಲ್ವಿಚಾರಕ ರಾಜಾರಾಮ್ ಶೆಟ್ಟಿ, ಉಪ್ಪೂರು ವ್ಯವಸಾಯಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಶ್ರೀಧರ ಪಿ ಎಸ್, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ ಮಹೇಶ್ ಶೆಟ್ಟಿ, ರಾಜೇಶ್ ಉಪಾಧ್ಯ, ರಂಜಿತ್ ಕುಮಾರ್, ಗುಲಾಬಿ ಪಡುಕರೆ, ನಾಗರಾಜ್ ಹಂದೆ,ಪ್ರೇಮ ಪೂಜಾರಿ, ವಸಂತ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಟಿ ಮಂಜುನಾಥ ಗಿಳಿಯಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು. ಗುಂಡ್ಮಿ ಶಾಖಾ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕಾಮತ್ ಸಹಕರಿಸಿದರು.