ನವದೆಹಲಿ: ಪಂಜಾಬ್ ರಾಜ್ಯದ ಫಿರೋಜ್ಪುರ್ ಜಿಲ್ಲೆಯಲ್ಲಿ ಪಾಕಿಸ್ತಾನದ ದೋಣಿಯನ್ನು ಬಿ.ಎಸ್.ಎಫ್ ಯೋಧರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಗಡಿಯ ಸನಿಹವಿರುವ ಫಿರೋಜ್ಪುರ್ ಜಿಲ್ಲೆ ಬಹಳ ಸೂಕ್ಷ್ಮ ಪ್ರದೇಶವಾಗಿದೆ. ಫಿರೋಜ್ಪುರ್ ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 20 ನಿಮಿಷಗಳ ಕಾಲ ಫ್ಲೈ ಓವರ್ ನಲ್ಲಿ ಭದ್ರತಾ ಲೋಪದಿಂದಾಗಿ ಕೆಲವೇ ದಿನಗಳ ಹಿಂದೆ ಸಿಲುಕಿದ್ದರು.
ಬಿ.ಎಸ್.ಎಫ್ 136 ಬಟಾಲಿಯನ್ ಯೋಧರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಪಾಕ್ ದೋಣಿ ಪತ್ತೆಯಾಗಿದೆ.
ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದಲ್ಲಿ ನಮ್ಮ ಗಮನಕ್ಕೆ ತರಲು ಆ ಪ್ರದೇಶದ ಜನರಿಗೆ ಹೇಳಿದ್ದೇವೆ. ಇಂತಹ ದೋಣಿಗಳನ್ನು ಮಾದಕ ವಸ್ತು ಹಾಗೂ ಶಸ್ತ್ರಾತ್ರಗಳನ್ನು ಸಾಗಿಸಲು ಉಪಯೋಗಿಸಲಾಗುತ್ತದೆ ಎಂದು ಹಿರಿಯ ಬಿ.ಎಸ್.ಎಫ್ ಅಧಿಕಾರಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ಧಿಸಂಸ್ಥೆ ವರದಿ ಮಾಡಿದೆ.