ಉಡುಪಿ: ವರ್ಷದ ಕೆಲವೇ ತಿಂಗಳುಗಳಲ್ಲಿ ಬೀಳುವ ಮಳೆಯು ಹರಿದು ಸಮುದ್ರ ಸೇರುತ್ತದೆ. ಇಂತಹ ಪ್ರದೇಶಗಳಲ್ಲಿ ನೀರನ್ನು ಶೇಖರಿಸಬಹುದಾಗಿದ್ದು, ಈ ರೀತಿಯಲ್ಲಿ ಶೇಖರಿಸಿದ ನೀರು ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಅನುಕೂಲವಾಗುತ್ತದೆ.
ಈ ದಿಸೆಯಲ್ಲಿ ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣಕ್ಕೆ ನಾವು ಆದ್ಯತೆ ಕೊಡಬೇಕಾಗಿದೆ ಎಂದು ಸ್ವಚ್ಛ ಭಾರತದ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ ಯುವ ಜನಾಂಗಕ್ಕೆ ಕರೆ
ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ, ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಶ್ರೀ ಕಾಳಿಕಾಂಬಾ ಭಜನಾ ಸಂಘ ತೆಂಕನಿಡಿಯೂರು (ರಿ), ಗುರು ಯುವಕ ಮಂಡಲ ನೇಜಾರು, ಭಗವತಿ ತೀಯಾ ಮಹಿಳಾ ಮಂಡಲ ನೇಜಾರು ಇವರ ಜಂಟಿ ಆಶ್ರಯದಲ್ಲಿ ನಡೆದ “ಸ್ವಚ್ಛ ಊರು – ಹಸಿರು ಊರು” ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ದೀಪ ಬೆಳಗಿಸಿ ಉದ್ಘಾಟಿಸಿ “ಸ್ವಚ್ಛತೆ ಮತ್ತು ಜಲ ಸಂರಕ್ಷಣೆ ಇತ್ತೀಚಿನ ದಿನಗಳಲ್ಲಿ ಅತಿ ಅಗತ್ಯವಾಗಿದೆ. ಈ ತರಬೇತಿ ಕಾರ್ಯಕ್ರಮದಲ್ಲಿ ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ತನ್ನಿ, ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಉಮೇಶ್ ಪೈ ಸ್ವಾಗತಿಸಿದರು. ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಷ್ಮಾ ಟಿ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು, ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಉಪಸ್ಥಿತರಿದ್ದರು.