ಬೆಂಗಳೂರು: ರಾಜ್ಯಾದ್ಯಂತ ಸರಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಡಿಸೆಂಬರ್ ತಿಂಗಳ ಆರಂಭದಿಂದ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ.
ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸಿದರೂ ಕೂಡ ಇಲ್ಲಿಯವರೆಗೆ ರಾಜ್ಯ ಸರಕಾರ ತುರ್ತಾಗಿ ಕ್ರಮ ಕೈಗೊಳ್ಳಲು ವಿಳಂಬ ನೀತಿಯನ್ನು ಅನುಸರಿಸಿದ ಪರಿಣಾಮ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸರಿಸುಮಾರು ಒಂದು ತಿಂಗಳಿನಿಂದ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.
ರಾಜ್ಯಾದ್ಯಂತ ಸುಮಾರು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು ಇವುಗಳಲ್ಲಿ 14,000 ಅತಿಥಿ ಉಪನ್ಯಾಸಕರಿದ್ದು 6500 ಪೂರ್ಣಕಾಲಿಕ ಉಪನ್ಯಾಸಕರಿದ್ದಾರೆ. ಹೆಚ್ಚಿನ ಕಾಲೇಜುಗಳಲ್ಲಿ ಕೆಲವು ವಿಷಯಗಳಿಗೆ ಪೂರ್ಣಕಾಲಿಕ ಉಪನ್ಯಾಸಕರು ಇಲ್ಲದ ಕಾರಣ ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಯಾವುದೇ ಪಾಠಗಳು ನಡೆದಿಲ್ಲ.
ರಾಜ್ಯಾದ್ಯಂತ ಕಳೆದ ಒಂದು ತಿಂಗಳಿನಿಂದ ಕಾಲೇಜಿಗೆ ಹೋಗಿ ಕೇವಲ ಒಂದೆರಡು ಗಂಟೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಬೋಧನೆ ಇಲ್ಲದ ಕಾರಣ ವಾಪಾಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಇಡೀ ರಾಜ್ಯದಲ್ಲಿ ಸರಕಾರಿ ಪದವಿ ಕಾಲೇಜುಗಳ ಶೈಕ್ಷಣಿಕ ವಾತಾವರಣ ಹಳಿ ತಪ್ಪಿದೆ.
ಇದರ ಬಗ್ಗೆ ಸರಕಾರ ತುರ್ತಾಗಿ ಮುಷ್ಕರ ನಿರತರಾಗಿರುವ ಅತಿಥಿ ಉಪನ್ಯಾಸಕರ ವೈಜ್ಞಾನಿಕವಾದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಶೈಕ್ಷಣಿಕ ವಾತಾವರಣ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಸಾಧ್ಯತೆಗಳಿವೆ.
ಅತಿಥಿ ಉಪನ್ಯಾಸಕರ ಬೇಡಿಕೆಗಳೇನು?: ರಾಜ್ಯಾದ್ಯಂತ ಇರುವ ಹದಿನಾಲ್ಕು ಸಾವಿರ ಅತಿಥಿ ಉಪನ್ಯಾಸಕರಲ್ಲಿ ಬಹುತೇಕ ಮಂದಿ ನೆಟ್, ಸ್ಲೆಟ್, ಪಿಹೆಚ್.ಡಿ ಆಗಿರುವವರೇ ಇದ್ದಾರೆ.
ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉನ್ನತ ಶಿಕ್ಷಣ ಪಡೆದು ಬೋಧನೆ ಮಾಡುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ನೀಡುವ ಕನಿಷ್ಠ ವೇತನದಲ್ಲಿ ಹೆಚ್ಚಳ ಮಾಡಬೇಕು ಮತ್ತು ಪಶ್ಚಿಮ ಬಂಗಾಳ ಮಾದರಿಯಲ್ಲಿ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಮಾಡಬೇಕು ಎಂದು ಅತಿಥಿ ಉಪನ್ಯಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರತಿವರ್ಷವೂ ಸರ್ಕಾರಕ್ಕೆ ಮನವಿ ಮಾಡಿದರೂ ಆಡಳಿತದಲ್ಲಿರುವವರು “ಸರಕಾರ ನಿಮ್ಮ ಪರವಾಗಿಯೇ ಇದೆ” ಎಂದು ಹೇಳುವುದು ಒಂದೆಡೆಯಾದರೆ, ವಿರೋಧ ಪಕ್ಷದಲ್ಲಿರುವವರು “ನಮ್ಮ ಸರ್ಕಾರ ಬಂದ ತಕ್ಷಣ ನಿಮ್ಮೆಲ್ಲಾ ಬೇಡಿಕೆ ಈಡೇರಿಸುತ್ತೇವೆ” ಎಂದು ಹೇಳಿ, ಅಧಿಕಾರಕ್ಕೆ ಬಂದ ನಂತರ “ಇದಕ್ಕೆ ಈ ಪ್ರಕರಣ ಅಡ್ಡಿಯಾಗುತ್ತದೆ, ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ” ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿಳಂಬ ನೀತಿ: ಯಾವುದೇ ಸರಕಾರವಿರಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದರೆ ಮಾತ್ರ ಯುವಜನರು ದೇಶದ ಬಲಿಷ್ಠ ಆಸ್ತಿಯಾಗುತ್ತಾರೆ ಎಂಬುದು ಸಾರ್ವಕಾಲಿಕ ಸತ್ಯ.
ಆದರೆ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಯಾಕೆ ಎಂದು ಹಿರಿಯ ಅತಿಥಿ ಉಪನ್ಯಾಸಕರೊಬ್ಬರು ಪ್ರಶ್ನಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ತರಗತಿಗಳು ನಡೆಯದೆ ಶೇ. 75ಕ್ಕಿಂತ ಪಠ್ಯಕ್ರಮ ಬಾಕಿ ಇರುವ ಕಾರಣ ಕಾಲೇಜುಗಳಿಗೆ ಪರೀಕ್ಷೆಗಳನ್ನು ನಡೆಸುವುದು ಸವಾಲಾಗಿ ಪರಿಣಮಿಸಿದೆ.
’ವಿಜಯವಾಣಿ’ ಪತ್ರಿಕೆ ನಡೆಸಿದ “ಜನಮತದಲ್ಲಿ” ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವ ಕ್ರಮ ಸರಿಯಲ್ಲ ಎಂದು ಶೇಕಡ 92 ರಷ್ಟು ಮಂದಿ ಓದುಗರು ಅಭಿಪ್ರಯ ವ್ಯಕ್ತಪಡಿಸಿದ್ದಾರೆ.
ಸಮಿತಿ ರಚನೆ: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಅಧ್ಯಯನ ವರದಿಯನ್ನು ನೀಡಲು ಜಿ. ಕುಮಾರ ನಾಯಕ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು ಈ ಸಮಿತಿಯಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳು ಕೂಡ ಇದ್ದಾರೆ. ಜನವರಿ 14ಕ್ಕೆ ಸಮಿತಿ ರಚನೆಯಾಗಿ ಒಂದು ತಿಂಗಳು ಆಗಲಿರುವ ಕಾರಣ ಅಷ್ಟರೊಳಗೆ ಸಮಿತಿ ವರದಿ ಸರ್ಕಾರದ ಕೈಸೇರಲಿದೆ.
ಲಿಖಿತ ಆದೇಶ ನೀಡುವವರೆಗೂ ಮುಷ್ಕರ ಕೈಬಿಡಲ್ಲ: ರಾಜ್ಯಾದ್ಯಂತ 14,000 ಅತಿಥಿ ಉಪನ್ಯಾಸಕರು ಕಳೆದ ಒಂದು ತಿಂಗಳಿನಿಂದ ತರಗತಿಗಳನ್ನು ಬಹಿಷ್ಕರಿಸಿದ್ದು, ಅತಿಥಿ ಉಪನ್ಯಾಸಕರ ಎಲ್ಲಾ ಸಂಘಟನೆಗಳು ಒಗ್ಗಟ್ಟಿನಿಂದ ಮುಷ್ಕರಕ್ಕೆ ಬೆಂಬಲ ಸೂಚಿಸಿ ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಧರಣಿ, ಪ್ರತಿಭಟನಾ ಮೆರವಣಿಗೆ ನಡೆಸಿವೆ.
ವಿದ್ಯಾರ್ಥಿಗಳು ಕೂಡ ಅತಿಥಿ ಉಪನ್ಯಾಸಕರ ಪರವಾಗಿ ಅಲ್ಲಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ವಿವಿಧ ಸಂಘಟನೆಗಳು ಕೂಡ ಅತಿಥಿ ಉಪನ್ಯಾಸಕರಿಗೆ ಬೆಂಬಲ ಸೂಚಿಸಿ ಪ್ರತಿಭಟನಾ ಜಾಥ ನಡೆಸಿವೆ.
ತೀರ್ಥಹಳ್ಳಿಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಯುತ್ತಿದೆ. ಉನ್ನತ ಶಿಕ್ಷಣ ಸಚಿವರು ಮುಷ್ಕರ ಕೈಬಿಡಿ ಎಂದು ಹೇಳಿದ್ದಾರೆ. ಲಿಖಿತ ಆದೇಶ ನೀಡುವವರೆಗೂ ಮುಷ್ಕರ ಕೈಬಿಡಲ್ಲ ಎಂದು ಮುಷ್ಕರ ನಿರತ ಅತಿಥಿ ಉಪನ್ಯಾಸಕರು ಹೇಳಿದ್ದಾರೆ.