ಶ್ರೀನಗರ: ಹೊಸ ವರ್ಷದ ಆರಂಭದಲ್ಲೇ ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ವೈಷ್ಣೋ ದೇವಿ ಮಂದಿರಲ್ಲಿ ದುರಂತ ಘಟನೆಯೊಂದು ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ಮಂದಿರದಲ್ಲಿ ಕಾಲ್ತುಳಿತದ ಕಾರಣ 12 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು ಕೆಲವರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. 15 ಮಂದಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ಶನಿವಾರ 02:15 ಸಮಯಕ್ಕೆ ಮಾತಾ ವೈಷ್ಣೋ ದೇವಿ ಭವನದ ಮೂರನೇ ಗೇಟ್ ಬಳಿ ಈ ಘಟನೆ ಸಂಭವಿಸಿದೆ. ನೆರೆದಿದ್ದ ಸಾವಿರಾರು ಯಾತ್ರಾರ್ಥಿಗಳ ನಡುವೆ ವಾಗ್ವಾದ ಏರ್ಪಟ್ಟು ನೂಕಾಟ ತಳ್ಳಾಟಕ್ಕೆ ಕಾರಣವಾಯಿತು. ತಕ್ಷಣ ಜಿಲ್ಲಾಡಳಿತ, ಪೊಲೀಸ್ ಹಾಗೂ ದೇಗುಲದ ವತಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು.
ಸಹಾಯವಾಣಿ: ದೇಗುಲ ಮಂಡಳಿಯು ಸಹಾಯವಾಣಿಯನ್ನು ಸ್ಥಾಪಿಸಿದೆ. ದೂರವಾಣಿ ಸಂಖ್ಯೆ: 01991234804 ಮತ್ತು 01991234053 ನಲ್ಲಿ ಸಂಪರ್ಕಿಸಬಹುದು. ಜಿಲ್ಲಾಡಳಿತದ ಸಹಾಯವಾಣಿ ಪಿಸಿಆರ್ ಕತ್ರಾ 01991-232010/ 9419145182, ಪಿಸಿಆರ್ ರಿಯಾಸಿ 01991245076/ 9622856295; ಡಿಸಿ ರಿಯಾಸಿ ನಿಯಂತ್ರಣ ಕೊಠಡಿ 01991-245763/ 9419839557
ದುರಂತಕ್ಕೆ ರಾಷ್ಟ್ರಪತಿ, ಪ್ರಧಾನಿ ಅವರು ಸಂತಾಪ ಸೂಚಿಸಿದ್ದಾರೆ. ಮಾತಾ ವೈಷ್ಣೋ ದೇವಿ ಭವನದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಪ್ರಾಣಹಾನಿಯಾಗಿರುವುದು ಅತೀವ ದುಃಖ ತಂದಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಯಿಂದಲೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಸೂಕ್ತ ನಿಗಾ ವಹಿಸಲು ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.