ಉಡುಪಿ: ನಮ್ಮ ದೇವಸ್ಥಾನಗಳು, ಮಠ ಮಂದಿರಗಳು ಬೇರೆ ಬೇರೆ ಕಾರಣಗಳಿಂದ ಸರ್ಕಾರದ ಹಿಡಿತದಲ್ಲಿದೆ. ನಮ್ಮ ದೇವಸ್ಥಾನಗಳು ನಮ್ಮ ಕೈಯಲ್ಲಿರಬೇಕು, ಸರ್ಕಾರದ ಹಿಡಿತದಲ್ಲಿರಬಾರದು. ಈ ಕೆಲಸವನ್ನು ಹಿಂದೂಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಶ್ರೀಕೃಷ್ಣ ಮಠದಲ್ಲಿ ಇಂದು ಪರ್ಯಾಯ ಶ್ರೀ ಅದಮಾರು ಮಠದ “ವಿಶ್ವಾರ್ಪಣಮ್” ಕಾರ್ಯಕ್ರಮದಲ್ಲಿ ಭಾರತದಲ್ಲಿ ಹಿಂದೂ ಪುನರುತ್ಥಾನದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಅಯೋಧ್ಯೆಯಲ್ಲಿ ಇನ್ನೆರಡು ವರ್ಷಗಳ ಒಳಗೆ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವುದು ಹಿಂದೂ ಜಾಗೃತಿಯ ಸಂಕೇತವಾಗಿದೆ.
ದೊಡ್ಡ ದೊಡ್ಡ ಕಂಪನಿಗಳನ್ನು ನಡೆಸಲು ಆಗುವ ಈ ಕಾಲಘಟ್ಟದಲ್ಲಿ ಒಂದು ದೇವಸ್ಥಾನ ನಡೆಸಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.
ನಮ್ಮದು ಸೆಕ್ಯೂಲರ್ ದೇಶ. ಅನ್ಯ ಧರ್ಮೀಯರ ಶ್ರದ್ಧಾಕೇಂದ್ರಗಳು ಅವರವರ ನಿಯಂತ್ರಣದಲ್ಲಿದೆ. ಆದರೆ ದೇವಸ್ಥಾನಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ.
ಸರ್ಕಾರಕ್ಕೆ ಜೋರಾದ ಎಚ್ಚರಿಕೆ ಕೊಡಬೇಕಾದ ಕಾಲ ಬಂದಿದೆ. ಉತ್ತರಾಖಂಡದಲ್ಲಿ ಈ ಅಭಿಯಾನ ಬಲಗೊಂಡ ಕಾರಣ ಅಲ್ಲಿಯ ಸರ್ಕಾರ ಎಲ್ಲಾ ದೇವಸ್ಥಾನಗಳ ಮೇಲಿನ ಹಿಡಿತವನ್ನು ಕೈಬಿಟ್ಟಿದೆ.
ಸನಾತನ ಸಂಸ್ಕೃತಿಯು ಅನೇಕ ವರ್ಷಗಳಿಂದ ಹಲವಾರು ದಾಳಿಗೆ ಒಳಗಾದರೂ ಅದರ ನಿರಂತರತೆಯನ್ನು ಉಳಿಸಿಕೊಂಡು ಬಂದಿದೆ. ನಮ್ಮ ಪೂರ್ವಿಕರಿಗಿದ್ದ ಧರ್ಮಶೃದ್ಧೆಯಿಂದ ಇದು ಸಾಧ್ಯವಾಯಿತು.
ಹಿಂದೂ ಧರ್ಮದ ಭದ್ರ ಬುನಾದಿ ನಮ್ಮ ಕುಟುಂಬ ವ್ಯವಸ್ಥೆ. ಹಲವಾರು ಆಚರಣೆಗಳು ಕುಟುಂಬದಲ್ಲಿ ನಡೆಯುವುದರಿಂದ ಕಿರಿಯರು ಅವುಗಳನ್ನು ಪಾಲನೆ ಮಾಡಿ ಬಂದಿದ್ದಾರೆ.
ಸೋಮನಾಥ, ಕಾಶಿಯ ವಿವಿಧ ದೇವಸ್ಥಾನಗಳು ಇದೀಗ ಜೀರ್ಣೋದ್ಧರಗೊಳ್ಳುತ್ತಿರುವುದು ಸಂತಸದ ವಿಚಾರ. ವಿದೇಶಗಳಲ್ಲಿ ಸನಾತನ ಭಾರತೀಯ ಸಂಸ್ಕೃತಿಯ ಪ್ರಚಾರಕ್ಕಾಗಿ ನಮ್ಮ ದೇಶದ ಪೂಜ್ಯ ಸಂತರು ಹೋಗಿದ್ದನ್ನು ಸ್ಮರಿಸಿದ ಅವರು, ಮಠ ಮಂದಿರಗಳ ಶಕ್ತಿಯನ್ನು ದ್ವಿಗುಣಗೊಳಿಸಲು ಕ್ರಿಯಾಶೀಲ ಪ್ರಯತ್ನಗಳು ನಡೆಯಬೇಕು. ಭಾರತವನ್ನು ವಿಶ್ವಗುರುವನ್ನಾಗಿಸಲು ಸನಾತನ ಭಾರತೀಯ ಸಂಸ್ಕೃತಿ ಮುಖ್ಯ ಭೂಮಿಕೆ ನಿರ್ವಹಿಸಿದೆ ಎಂದರು.
ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿದರು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಅನುಗ್ರಹ ಸಂದೇಶ ನೀಡಿದರು.
ಶಾಸಕ ಕೆ. ರಘುಪತಿ ಭಟ್, ವಾಸ್ತು ತಜ್ಞರಾದ ಸುಬ್ರಹ್ಮಣ್ಯ ಭಟ್, ಹೈದರಾಬಾದ್ ಹೋಟೆಲ್ ದ್ವಾರಕಾ ಮಾಲಕರಾದ ಬಿ.ಪಿ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ಅದಮಾರು ಮಠ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿ, ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.