ನಿನ್ನೆ ಸಂಜೆ ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ. ಎಲ್ಲರಿಗೂ ಆಶ್ಚರ್ಯ. ಇದೇನಿದು, ತೇಲುವ ತಟ್ಟೆಗಳೇ, ಅನ್ಯ ಲೋಕದಿಂದ ಯಾರಾದರೂ ಬಂದರೇ, ಧೂಮಕೇತುವೇ, ಅಥವಾ ಯುದ್ಧವೇನಾದರೂ ಪ್ರಾರಂಭವಾಯಿತೇ, ಇದೇನಿದು, ಇದೇನಿದು?? ಕರಾವಳಿಯಾದ್ಯಂತ ಎಲ್ಲರಲ್ಲೂ ಅನೇಕಾನೇಕ ಪ್ರಶ್ನೆಗಳು.
ನಿನ್ನ ಸಂಜೆ ಹಲವಾರು ಮಂದಿ ಸುಮಾರು 7.23ಕ್ಕೆ ನೈರುತ್ಯ ಆಕಾಶದಿಂದ ಉತ್ತರಕ್ಕೆ ನಾಲ್ಕು ನಿಮಿಷ, ಹಾರಾಟವಾಡುತ್ತಾ ತೇಲುವ ಬೆಳಕಿನ ಮಾಲೆಗಳನ್ನು ನೋಡಿದರು. ಇದು ತೇಲುವ ಬೆಳಕಿನ ಮಾಲೆಯಲ್ಲ. ಹಾಗೆಯೇ ಕಾಣುವ ಸುಮಾರು 60 ಕೃತಕ ಉಪಗ್ರಹಗಳ ಸಾಲು.
ಅಲನ್ ಮಸ್ಕ್ ರವರ ಹೊಸ ಸಾಹಸ: ಸ್ಪೇಸ್ ಎಕ್ಸ್ ಕಂಪೆನಿಯ ಮೂಲಕ ಭೂಮಿಯ ಎಲ್ಲಾ ಭಾಗದವರಿಗೂ ನೆಟ್ವರ್ಕ್ ಸಂಪರ್ಕವನ್ನು ಕಲ್ಪಿಸಲು ಮಾಡುತ್ತಿರುವ ಹೊಸ ತಂತ್ರಜ್ಞಾನ. ಇನ್ನು ನಾಲ್ಕು ವರ್ಷಗಳಲ್ಲಿ ಆಕಾಶದಲ್ಲಿ ಸುಮಾರು 60 ಸಾವಿರ ಕೃತಕ ಉಪಗ್ರಹಗಳಿಂದ ಇಡೀ ಭೂಮಿಯ ಎಲ್ಲಾ ಸ್ಥಳಗಳಲ್ಲಿ ಸಂಪರ್ಕವನ್ನು ಹೊಂದಿಸಲು ಕೃತಕ ಉಪಗ್ರಹಗಳಿಂದ ಮಾಡುತ್ತಿರುವ ವ್ಯವಸ್ಥೆ ಸ್ಟಾರ್ ಲಿಂಕ್ ಸ್ಯಾಟಲೈಟ್ಸ್ (Star link satellites.) ಇವುಗಳು ಕೆಳ ಸ್ತರದ ಕೃತಕ ಉಪಗ್ರಹಗಳು.( Low earth orbit satellites)
ಭೂಮಿಯಿಂದ ಸುಮಾರು 550 ಕಿಮೀ ಎತ್ತರದ ಆಕಾಶದಲ್ಲಿ 60 ಕೃತಕ ಉಪಗ್ರಹ ಗಳ ಮಾಲೆ ಅತೀ ವೇಗವಾಗಿ ತೇಲುತ್ತಿದೆ. ಪ್ರತಿ ಉಪಗ್ರಹ ಸುಮಾರು 260 ಕೆಜಿಗಳಿದ್ದು ಒಂದು ಮೀಟರ್ ನಷ್ಟು ದೊಡ್ಡದಿದೆ.
ಕೃತಕ ಉಪಗ್ರಹಗಳು ಬರೇ ಕಣ್ಣಿಗೆ ಕಾಣುತ್ತವೆಯೇ.?
ಇಲ್ಲ. ಆದರೆ ಅವುಗಳ ಚಲನವಲನಗಳನ್ನು ಸಂಜೆ ಮತ್ತು ಬೆಳಗಿನ ಜಾವ ಗಮನಿಸಬಹುದು. ಸಂಜೆ ನಮಗೆ ಕತ್ತಲಾದರೂ 550 ಕೀಮೀ ಎತ್ತರದಲ್ಲಿರುವ ಈ ಕೃತಕ ಉಪಗ್ರಹಗಳಿಗೆ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಇವುಗಳಲ್ಲಿರುವ ಸೌರ ಫಲಕಗಳಿಂದ ಪ್ರತಿಫಲಿಸಿದ ಈ ಬೆಳಕು ನಮ್ಮ ಕಣ್ಣಿಗೆ ಬಿದ್ದು ಈ ಕೃತಕ ಉಪಗ್ರಹಗಳ ದರ್ಶನವಾಗುತ್ತದೆ.
ಇವುಗಳ ಉಪಯೋಗ: ಓಪ್ಟಿಕಲ್ ಫೈಬರ್ನಿಂದ ಹಳ್ಳಿ ಹಳ್ಳಿಗೂ ಸಂಪರ್ಕ ಬಹುಕಷ್ಟ. ಆದರೆ ಈ ಕೃತಕ ಉಪಗ್ರಹಗಳಿಂದ ಅತೀ ಸುಲಭವೆನ್ನುತ್ತಿದ್ದಾರೆ.
ಇವುಗಳಿಂದ ತೊಂದರೆ ಆಕಾಶ ನಕ್ಷತ್ರ ವೀಕ್ಷಕರಿಗೆ ಹಾಗೂ ಖಗೋಳ ವಿಜ್ಞಾನಿಗಳಿಗೆ. ಇನ್ನು ಕೆಲ ವರ್ಷಗಳಲ್ಲಿ ಕಾಣುವ ಹತ್ತು ನಕ್ಷತ್ರಗಳಲ್ಲಿ ಒಂದು ಈ ಕೃತಕ ಉಪಗ್ರಹವಿರಬಹುದು. ಹಾಗೆಯೇ ಒಂದು ಆಕಾಶ ಕಾಯದ ಆಧ್ಯಯನ ಮಾಡುತ್ತಿರುವ ಖಗೋಳ ವಿಜ್ಞಾನಿಗೆ ಈ ಕೃತಕ ಉಪಗ್ರಹಗಳ ಬೆಳಕು ತೊಂದರೆಯಾಗಬಹುದು.
ಇವತ್ತು ಡಿಸೆಂಬರ್ 21ರ ಸಂಜೆಯೂ 7:11 ಕ್ಕೆ ಪಶ್ಚಿಮೋತ್ತರ ಆಕಾಶದಲ್ಲಿ ಸುಮಾರು 20 ಡಿಗ್ರಿ ಎತ್ತರದಲ್ಲಿ ಕಾಣಲಿದೆ. ನಿನ್ನೆಯಷ್ಟು ಚೆಂದವಿರುವುದಿಲ್ಲ. ಹಾಗೆ ಡಿಸೆಂಬರ್ 24 ರ ಸಂಜೆಯೂ 7:23 ಕ್ಕೆ ಉತ್ತರ ಆಕಾಶದಲ್ಲಿ ಕೆಲ ನಿಮಿಷ ಕಾಣಬಹುದು.
ಖಗೋಳಾಸಕ್ತರ ಚಿಂತೆ: ಈ ವರೆಗಿನ ಸುಮಾರು 11670 ಕೃತಕ ಉಪಗ್ರಹಗಳನ್ನು ಹಾರಿಸಿಯಾಗಿದೆ. ಇವೆಲ್ಲವೂ ಸುಮಾರು 200 ಕಿಮೀ ಎತ್ತರದಿಂದ 36 ಸಾವಿರ ಕಿಮೀ ಎತ್ತರದಲ್ಲಿ ಭೂಮಿಗೆ ತಿರುಗುತ್ತಿವೆ. ಇವುಗಳಲ್ಲಿ ಈಗ 4300 ಸಕ್ರಿಯವಾಗಿ ಕೆಲಸ ಮಾಡುತ್ತಿವೆ.
ಆದರೆ ಇನ್ನು ನಾಲ್ಕು ವರ್ಷಗಳಲ್ಲಿ ಇವುಗಳ ಜೊತೆ ಈ ಹೊಸ ಯೋಜನೆಯ 60 ಸಾವಿರ ಕೃತಕ ಉಪಗ್ರಹಗಳು ಅದೇನು ಹೊಸ ಆಕಾಶವನ್ನು ಸೃಷ್ಟಿಸುವವೋ ಎನ್ನುವುದು ಖಗೋಳಾಸಕ್ತರ ಚಿಂತೆ.
-ಡಾ. ಎ. ಪಿ. ಭಟ್. ಉಡುಪಿ.