ಢಾಕಾ: ಇಂದು ಢಾಕಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ 6-0 ಗೋಲುಗಳಿಂದ ಜಪಾನ್ ವಿರುದ್ಧ ಭರ್ಜರಿ ಗೆಲುವನ್ನು ದಾಖಲಿಸಿದೆ.
ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದರೆ, ದಿಲ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಸುಮಿತ್ ಮತ್ತು ಶಂಶೇರ್ ಸಿಂಗ್ ತಲಾ ಒಂದು ಗೋಲು ಸೇರಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತ, ಈಗಾಗಲೇ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಭಾರತವು ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗಿನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವನ್ನು ಸಾಧಿಸಿದೆ. ಒಂದು ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದೆ.
ಐತಿಹಾಸಿಕ ಒಲಿಂಪಿಕ್ ಅಭಿಯಾನದ ನಂತರ ತಮ್ಮ ಮೊದಲ ಪಂದ್ಯಾವಳಿ ಆಡುತ್ತಿರುವ ಭಾರತ, ಆರಂಭಿಕ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-2 ಡ್ರಾ ಸಾಧಿಸಿತು. ನಂತರ ಆತಿಥೇಯ ಬಾಂಗ್ಲಾದೇಶವನ್ನು 9-0 ಅಂತರದಿಂದ ಸೋಲಿಸಿ, ಮೊನ್ನೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಗೋಲುಗಳಿಂದ ಸೋಲಿಸಿದನ್ನು ಇಲ್ಲಿ ಸ್ಮರಿಸಬಹುದು.
ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಈಗ ನಾಲ್ಕು ಪಂದ್ಯಗಳಿಂದ 10 ಅಂಕಗಳನ್ನು ಪಡೆದಿದ್ದು, ಮಂಗಳವಾರ ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ.