ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ 100 ಪ್ರತಿಶತದಷ್ಟು ಡಬಲ್ ಡೋಸ್ ಕೋವಿಡ್ ಲಸಿಕಾಕರಣ ಗುರಿಯನ್ನು ಸಾಧಿಸಿದೆ. ತನ್ಮೂಲಕ ಅಂಡಮಾನ್ ನಿಕೋಬಾರ್ ದ್ವೀಪ, ಕೋವಿಶೀಲ್ಡ್ ಮಾತ್ರ ಬಳಸಿಕೊಂಡು ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶವಾಗಿದೆ.
ಜನವರಿ 16 ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಿನವೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೋವಿಡ್ ಲಸಿಕಾಕರಣ ಪ್ರಾರಂಭಿಸಲಾಯಿತು.
836 ದ್ವೀಪಗಳು ಉತ್ತರದಿಂದ ದಕ್ಷಿಣಕ್ಕೆ 800 ಕಿಲೋಮೀಟರ್‌ಗಳಷ್ಟು ಹರಡಿಕೊಂಡಿರುವ ಅಂಡಮಾನ್ ನಿಕೋಬಾರ್ ನಲ್ಲಿ ಲಸಿಕೆ ಹಾಕುವುದು ಅತ್ಯಂತ ಸವಾಲಿನದ್ದಾಗಿತ್ತು ಎಂದು ಅಲ್ಲಿನ ಆಡಳಿತ ಟ್ವೀಟ್ ಮಾಡಿದೆ. ಸಮುದ್ರ, ಅತ್ಯಂತ ದಟ್ಟವಾದ ಕಾಡು, ಬೆಟ್ಟಗಳು ಮತ್ತು ಪ್ರತಿಕೂಲ ಹವಾಮಾನದಲ್ಲಿ ಅಂಡಮಾನ್ ಈ ಗುರಿಯನ್ನು ಯಶಸ್ವಿಯಾಗಿದೆ ಸಾಧಿಸಿದೆ.