ಉಡುಪಿ: ಕೋವಿಡ್-19 ಅವಧಿಯಲ್ಲಿ ಮಕ್ಕಳ ಮೇಲಾಗಿರುವ ವಿವಿಧ ದುಷ್ಪರಿಣಾಮಗಳ ಕುರಿತು, ಮಕ್ಕಳ ಮೂಲಕವೇ ತಿಳಿದು, ಅವುಗಳಿಗೆ ಸೂಕ್ತ ನೆರವು ಹಾಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯುನಿಸೆಫ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ, ಕೋವಿಡ್-19 ಅವಧಿಯಲ್ಲಿ ಮಕ್ಕಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತ ಮಕ್ಕಳ ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಮಾರು 1.5 ವರ್ಷಕ್ಕೂ ಅಧಿಕ ಅವಧಿಯ ಕೋವಿಡ್-19 ಪಿಡುಗು, ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು. ಈ ಅವಧಿಯಲ್ಲಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಹೊರಗುಳಿದಿದ್ದರು. ಮೊಬೈಲ್ ಮೂಲಕವೇ ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದರು. ಮಕ್ಕಳು ಹೆಚ್ಚು ಕಾಲ ಮೊಬೈಲ್ ಬಳಸುವುದರ ಕುರಿತಂತೆ ಪೋಷಕರು ಪರಿಶೀಲಿಸಬೇಕು.
ಕೋವಿಡ್-19 ನ ಸಮಯದಲ್ಲಿ ಮಕ್ಕಳು, ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕವಾಗಿ ಎದುರಿಸಿರುವ ಸಮಸ್ಯೆಗಳ ಕುರಿತಂತೆ ಮಕ್ಕಳ ಮೂಲಕವೇ ಅಹವಾಲು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ, ಸಮಸ್ಯೆಗಳಿಗೆ ಸೂಕ್ತ ನೆರವು ಒದಗಿಸಲಾಗುವುದು ಎಂದು ನ್ಯಾ.ಶರ್ಮಿಳಾ ಹೇಳಿದರು.
ಡಿವೈಎಸ್ಪಿ ಸುಧಾಕರ್ ಮಾತನಾಡಿ, ಪೊಲೀಸ್ ಇಲಾಖೆ ಈಗ ಜನಸ್ನೇಹಿ ಮತ್ತು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳು ತಮ್ಮ ಸಮಸ್ಯೆಗಳನ್ನು ಯಾವುದೇ ಭಯ, ಅಂಜಿಕೆಯಿಲ್ಲದೇ ತಿಳಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಸಮಯದಲ್ಲಿ ಅಗತ್ಯ ಸಹಾಯ ಕೋರಿದಲ್ಲಿ, ಎಲ್ಲಾ ರೀತಿಯ ಸಹಾಯ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕರಪ್ಪ ಮಾತನಾಡಿ, ಕೋವಿಡ್-19 ಅವಧಿಯಲ್ಲಿ ಮಕ್ಕಳು ಮನೆಯಲ್ಲಿಯೇ ಇರಬೇಕಾಗಿದ್ದರಿಂದ ಮಕ್ಕಳ ಮೇಲೆ ವಿವಿಧ ಬಗೆಯ ದೌರ್ಜನ್ಯಗಳು, ಬಾಲ ಕಾರ್ಮಿಕರಾಗಿ ಬಳಸಿಕೊಂಡಿರುವುದು, ಮಕ್ಕಳ ಹಕ್ಕುಗಳ ಉಲ್ಲಂಘನೆಗಳು ನಡೆದಿರುವ ಸಾಧ್ಯತೆಗಳಿವೆ.
ಮಕ್ಕಳು ಈ ಅಹವಾಲು ಸ್ವೀಕಾರ ಸಮಯದಲ್ಲಿ, ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದಲ್ಲಿ, ಜಿಲ್ಲಾ ಹಂತದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾ ಹಂತದಲ್ಲಿ ಬಗೆಹರಿಸಲಾಗುವುದು. ಇಲ್ಲಿ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ರಾಜ್ಯ ಹಂತದಲ್ಲಿ ಮತ್ತು ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾರ್ಯೋನ್ಮುಖವಾಗಲಿದೆ ಎಂದರು.
ಮಕ್ಕಳ ಹಕ್ಕುಗಳ ಕುರಿತ ಅರಿವು ಮೂಡಿಸುವ ಕರಪತ್ರ, ಪೋಸ್ಟರ್, ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ಶೇಷಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೋನಾಲ್ಡ್ ಬಿ ಫುಟಾರ್ಡೋ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ ಸ್ವಾಗತಿಸಿದರು. ಕೃಷ್ಣ ನಿರೂಪಿಸಿ, ವಂದಿಸಿದರು.
ಶಾಲೆಯಲ್ಲಿ ಆಟದ ಮೈದಾನ ಇಲ್ಲದಿರುವ ಬಗ್ಗೆ, ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೋವಿಡ್-19 ಸಮಯದಲ್ಲಿ ಆನ್‌ಲೈನ್ ಪಾಠಗಳನ್ನು ಕೇಳಿ ತಲೆನೋವು, ಕಣ್ಣು ನೋವು ಬಂದಿರುವ ಬಗ್ಗೆ, ಮೊಬೈಲ್ ಸುಲಭವಾಗಿ ಸಿಕ್ಕ ಕಾರಣ ಇತರೆ ವಿದ್ಯಾರ್ಥಿಗಳು ಅದರ ದುರ್ಬಳಕೆ ಮಾಡುತ್ತಿರುವ ಹಾಗೂ ಅಪಾಯಕಾರಿ ಗೇಮ್‌ಗಳನ್ನು ಆಡುವ ಬಗ್ಗೆ ಮತ್ತು ಪ್ರಸ್ತುತ ಶಾಲೆ ಆರಂಭಗೊಂಡ ನಂತರ ಹಳ್ಳಿ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ದೊರೆಯದೇ ಇರುವುದು ಮುಂತಾದ ಸಮಸ್ಯೆಗಳ ಬಗ್ಗೆ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ಅಹವಾಲುಗಳನ್ನು ಸಲ್ಲಿಸಿದರು.