(ಉಡುಪಿ ಬುಲೆಟಿನ್ ವಿಶೇಷ ವರದಿ)ಕಳೆದ ವರ್ಷ ಕೊರೊನಾ ಭೀಕರತೆಯು ದೀಪಾವಳಿ ಸಂದರ್ಭದಲ್ಲಿ ಕಡಿಮೆಯಾಗಿದ್ದೇ ತಡ, ಬಹುತೇಕರು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿದರು. ಪರಿಣಾಮವಾಗಿ ಈ ವರ್ಷದ ಆರಂಭದಲ್ಲಿ ಕೊರೊನಾ ಮತ್ತೊಮ್ಮೆ ಉಗ್ರ ರೂಪ ತಾಳಿತು. ಸೋಂಕು ಕಡಿವಾಣ ಹಾಕಲು ಲಾಕ್ ಡೌನ್, ಸೀಲ್ ಡೌನ್, ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ, ಶಾಲಾ ಕಾಲೇಜುಗಳಿಗೆ ರಜೆ ಇತ್ಯಾದಿ ಇತ್ಯಾದಿಗಳಿಂದ ದೇಶದ ವ್ಯವಸ್ಥೆಯನ್ನೇ ಕಣ್ಣಿಗೆ ಕಾಣದ ಕ್ರಿಮಿ ಬುಡಮೇಲು ಮಾಡಿತು.
ಕಳೆದ ವರ್ಷದ ಚಿತ್ರಣ ದೇಶಾದ್ಯಂತ ಇದೀಗ ಮರುಕಳಿಸಿದೆ. ಅಂದರೆ ಕೊರೊನಾ ಸೋಂಕು ಸತತವಾಗಿ ಇಳಿಮುಖವಾಗುತ್ತಿದೆ. ದಿನಂಪ್ರತಿ ದೇಶಾದ್ಯಂತ ಹತ್ತು ಸಾವಿರ ಪಾಸಿಟಿವ್ ಪ್ರಕರಣ ಕಂಡುಬರುತ್ತಿದೆ. ಅವುಗಳಲ್ಲಿ ಶೇ 50 ಕ್ಕಿಂತ ಹೆಚ್ಚು ಪ್ರಕರಣ ಕೇರಳದಲ್ಲಿ ವರದಿಯಾಗುತ್ತಿರುವುದು ನಮ್ಮ ರಾಜ್ಯದ ಜನತೆ ಅದರಲ್ಲಿಯೂ ಕರಾವಳಿ ಕರ್ನಾಟಕ, ಕೇರಳ ಗಡಿಯಲ್ಲಿರುವ ಇತರೆ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ದಿನಕ್ಕೆ 250-300 ಪ್ರಕರಣಗಳು ವರದಿಯಾಗುತ್ತಿದ್ದರೆ ಉಡುಪಿಯಲ್ಲಿ 5-15 ಮಂದಿ ಸೋಂಕಿತರಾಗುತ್ತಿದ್ದಾರೆ.
ಸಾವಿನ ಪ್ರಮಾಣವು ಇಳಿಮುಖವಾಗಿದೆ. ದೇಶಾದ್ಯಂತ ಪ್ರತಿದಿನ 350-500 ಮಂದಿ ಸಾವನ್ನಪ್ಪುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹಲವಾರು ದಿನಗಳಿಂದ ಯಾವುದೇ ಸಾವು ಸಂಭವಿಸುತ್ತಿಲ್ಲ. ಇಷ್ಟೆಲ್ಲಾ ಅಂಕಿ ಅಂಶಗಳನ್ನು ನೋಡಿದ ಮೇಲೆ ’ಕೊರೊನಾ ಹೋಯ್ತು ಮಾರಾರ್ಯ್ರೇ’ ಎಂದು ಅದೆಷ್ಟೋ ಮಂದಿ ಈಗಾಗಲೇ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ತಿರುಗಾಡಲು ಆರಂಭಿಸಿದ್ದಾರೆ.
ಖ್ಯಾತ ಹೃದ್ರೋಗ ತಜ್ಞರು ಹೇಳಿದ ಹಾಗೆ, ಎರಡು ವರ್ಷ ಮಾಡಿದ ತಪಸ್ಸು ಫಲಪ್ರದವಾಗಬೇಕಾದರೆ ಕನಿಷ್ಠ ಮೂರು ತಿಂಗಳು ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಪ್ರಜ್ಞಾವಂತರಾಗಿ ನಾವು ವರ್ತಿಸಬೇಕು. ಹಾಗಂತ ಮನೆಯ ಮೂಲೆಯಲ್ಲಿ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕಾಲಹರಣ ಮಾಡುವುದಲ್ಲ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ನಮ್ಮ ಜೀವನದ ಭಾಗವಾಗಬೇಕು.
ಜಪಾನ್ ದೇಶದವರು ಕೊರೊನಾ ಬರುವ ಮುಂಚೆಯೇ ಮಾಸ್ಕ್ ಧರಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ. ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕಿಗೆ ಕಡಿವಾಣ ಒಂದೆಡೆಯಾದರೆ ಮತ್ತೊಂದೆಡೆ ಡಸ್ಟ್ ಎಲರ್ಜಿ ಬರುವ ಸಾಧ್ಯತೆ ಕಡಿಮೆ.
ಅನಾವಶ್ಯಕ ಗುಂಪಿನೊಂದಿಗೆ ಸೇರುವುದನ್ನು ಕನಿಷ್ಠ ಮೂರು ತಿಂಗಳಿನ ಮಟ್ಟಿಗೆ ಕೈ ಬಿಡುವುದು ಒಳ್ಳೆಯದು. ಕಳೆದ ವರ್ಷ ಅಕ್ಟೋಬರ್-ನವೆಂಬರ್-ಡಿಸೆಂಬರ್ ನಲ್ಲಿ ನಾವೆಲ್ಲರೂ ಮೈ ಮರೆತ ಪರಿಣಾಮ ಈ ವರ್ಷದ ಆರಂಭದಲ್ಲಿ ಕೊರೊನಾ, ರಕ್ತಬೀಜಾಸುರನ ಹಾಗೆ ದೇಶಾದ್ಯಂತ ಹಾಹಾಕಾರ ಎಬ್ಬಿಸಿ ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥವನ್ನಾಗಿಸಿದ ವಿಚಾರ ನಿಮಗೆಲ್ಲರಿಗೂ ಚೆನ್ನಾಗಿ ಗೊತ್ತಿದೆ. ಅದೆಷ್ಟು ಜೀವಗಳು ಬಲಿಯಾದವು? ಯಾರೋ ಮಾಡಿದ ತಪ್ಪಿಗೆ ನಿಯಮ ಪಾಲಿಸಿದ ವ್ಯಕ್ತಿ ಕೂಡ ಅನುಭವಿಸಬೇಕಾಯಿತು.
ಲಸಿಕೆ ಹಾಕಿದ್ದೇವೆ ಎಂದು ನಿರ್ಲಕ್ಷ್ಯ ಮಾಡಬೇಡಿ: ಲಸಿಕೆ ಪಡೆದವರು ಲಸಿಕೆ ಪಡೆಯದವರನ್ನು ಮನವೊಲಿಸಿ ಲಸಿಕೆ ಪಡೆಯುವ ಹಾಗೆ ಮಾಡಬೇಕು. ಈಗಾಗಲೇ ಲಸಿಕೆ ಹಾಕಿಸಿಕೊಂಡವರು ’ನಾವು ಚಿರಂಜೀವಿ’ ಎಂದು ಕೊರೊನಾ ನಿಯಮ ಗಾಳಿಗೆ ತೂರಿದರೆ ದೊಡ್ಡ ಗಂಡಾಂತರ ಮುಂದೆ ಕಾದಿದೆ. ನನ್ನ ಬಳಿ ಲೈಸನ್ಸ್ ಇದೆ, ವಿಮೆ ಇದೆ ಎಂದು ಯದ್ವಾ ತದ್ವಾ ಗಾಡಿ ಚಲಾಯಿಸಿದರೆ ಪರಿಣಾಮ ಹೇಗಿರುತ್ತದೆ ಯೋಚಿಸಿ.. ಆದ್ದರಿಂದ ಯಾವುದೇ ಸನ್ನಿವೇಶದಲ್ಲಿಯೂ ನಿರ್ಲಕ್ಷ, ಅಸಡ್ಡೆ ಬೇಡ.
ಕೊರೊನಾ ಆರಂಭದಲ್ಲಿ ಯಾವ ರೀತಿ ಗಂಭೀರವಾಗಿ, ಎಲ್ಲಾ ನಿಯಮಗಳನ್ನು ನಾವೆಲ್ಲರೂ ಪಾಲಿಸಿದ್ದೇವೋ ಹಾಗೆಯೇ ಇನ್ನು ಕನಿಷ್ಠ ಎರಡು-ಮೂರು ತಿಂಗಳು ಅದೇ ರೀತಿ ಬಹಳ ಎಚ್ಚರಿಕೆಯಿಂದ (ಮಾಸ್ಕ್ ಧಾರಣೆ, ಸ್ಯಾನಿಟೈಸರ್/ ಸಾಬೂನು ನೀರಿನಲ್ಲಿ ಕೈಗಳನ್ನು ಸ್ವಚ್ಛವಾಗಿಸುವುದು, ಅನಾವಶ್ಯಕ ಗುಂಪಿನೊಂದಿಗೆ ಸೇರದಿರುವುದು, ಲಸಿಕೆ ಪಡೆಯುವುದು) ಹೆಜ್ಜೆಯನ್ನಿಟ್ಟರೆ ಕೊರೊನಾ ಮುಕ್ತ ಭಾರತ ನಿರ್ಮಾಣ ಶತಃಸಿದ್ಧ.