ಉಡುಪಿ: ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಈ ಬಾರಿಯ ದೀಪಾವಳಿ ಗೋಪೂಜೆಯ ದಿನ ಕಡಿಯಾಳಿ ಶ್ರೀ ಮಹಿಷಮರ್ದಿನಿ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ಸಾಮೂಹಿಕ ಗೋಪೂಜೆ ವೈಭವಯುತವಾಗಿ ಜರಗಿತು.
ಆದರ ಪ್ರಯುಕ್ತ ಶುಕ್ರವಾರ ಸಂಜೆ ದೇವಳದಲ್ಲಿ ಕೆ.ಎಂ.ಎಫ್. ಅಧ್ಯಕ್ಷ ರವಿರಾಜ್ ಹೆಗ್ಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕರ್ನಾಟಕ ಸರ್ಕಾರದ ನೂತನ ಆದೇಶವನ್ನು ಶ್ಲಾಘಿಸಿದರು.
ವಾಸುದೇವ ಭಟ್ ಪೆರಂಪಳ್ಳಿ ಗೋವಿನ ಉಪಯೋಗ, ಗೋಮಾತೆಯ ಇಂದಿನ ಅವಶ್ಯಕತೆ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ. ರವಿರಾಜ್ ಆಚಾರ್ಯ, ಗೋವಿನ ವೈಜ್ಞಾನಿಕ ಉಪಯುಕ್ತತೆ, ಗೋವಿನ ಉತ್ಪನ್ನಗಳು ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ವಿವರಿಸಿದರು.
ದೇವಳದ ಪರಿಸರದಲ್ಲಿ ಗೋವುಗಳನ್ನು ಮನೆಯಲ್ಲಿ ಸಾಕಿ ಸೇವೆ ನೀಡುತ್ತಾ ಬಂದಿರುವ ಶೇಖರ್ ಸೇರಿಗಾರ್, ಸುರೇಶ್ ಸೇರಿಗಾರ್, ಜಯರಾಮ ಸೇರಿಗಾರ್ ಕಡಿಯಾಳಿ ಇವರುಗಳನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮೋಹನ್ ಉಪಾಧ್ಯಾಯ, ದೇವಳದ ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ, ಸರದಿ ಅರ್ಚಕ ದುರ್ಗಾ ಪ್ರಸಾದ್ ಉಪಾಧ್ಯಾಯ, ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಸಂಧ್ಯಾ ಪ್ರಭು, ರಮೇಶ್ ಶೇರಿಗಾರ್, ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯ ಗಣೇಶ್ ನಾಯ್ಕ್ ವಂದಿಸಿದರು. ಊರಿನ ಹಿರಿಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.