ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣ ಮತ್ತು ಇಥೀನಲ್ ಘಟಕದ ಯೋಜನೆಗೆ ಪೂರಕವಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಬ್ಬು ಬೆಳೆಯಲು ಕೇಂದ್ರ ಸರಕಾರ ಕಬ್ಬು ಅಭಿವೃದ್ಧಿಗೆ ಶೀಘ್ರ ರೂ ಹತ್ತು ಕೋಟಿ ಅನುದಾನ ನೀಡುವಂತೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ನೀಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ರೈತರ ಆರ್ಥಿಕ ಪ್ರಗತಿ ಆಗಲು ಕಬ್ಬು ಬೆಳೆಯನ್ನು ಬೆಳೆಸಬೇಕು. ಅದಕ್ಕಾಗಿ ಕೇಂದ್ರ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಇಥೆನಾಲ್ ತಯಾರಿಕಾ ಘಟಕ ಪ್ರಾರಂಭಿಸಲು ಕೇಂದ್ರ ಸರಕಾರ ಶೀಘ್ರದಲ್ಲೇ ಪ್ರಾರಂಭಿಕ ಮಂಜೂರಾತಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಕಾರ್ಖಾನೆಯ ಆವರಣದಲ್ಲಿ ಆಹಾರ ಸಂಸ್ಕರಣಾ ಘಟಕ, ವೇರ್ ಹೌಸ್, ಕೃಷಿ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಕೇಂದ್ರ ಸರಕಾರದಿಂದ ವಿಶೇಷ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಆಹಾರ ನಿಗಮದ ಉಪಾಧ್ಯಕ್ಷರಾದ ಕಿರಣ್ ಕೊಡ್ಗಿ, ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.