ಜಮ್ಮು ಕಾಶ್ಮೀರ: ಎಲ್ಲಾ ಯೋಧರು ತಮ್ಮ ಕುಟುಂಬದವರಂತೆ, ಅವರೆಲ್ಲರೂ ತಾಯಿ ಭಾರತಿಯ ಸುರಕ್ಷಾ ಕವಚ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜಮ್ಮು ಕಾಶ್ಮೀರದ ನೌಶೇರಾದಲ್ಲಿ ಇಂದು ಸೈನಿಕರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ, ಯೋಧರನ್ನು ಉದ್ದೇಶಿಸಿ ಮಾತನಾಡಿದರು.
ನಿದ್ದೆಯಿಲ್ಲದೆ ಗಡಿ ಕಾಯುವ ವೀರ ಯೋಧರಿಂದಾಗಿ ದೇಶದೊಳಗಿನ ಜನರು ಶಾಂತಿಯುತವಾಗಿ ಮಲಗಬಹುದು ಮತ್ತು ಅವರು ಸಂತೋಷದಿಂದ ಹಬ್ಬಗಳನ್ನು ಆಚರಿಸಬಹುದು. ನೌಶೇರಾದಲ್ಲಿ ತಾವು ಪ್ರಧಾನಿಯಾಗಿ ಅಲ್ಲ ಸೈನಿಕರ ಕುಟುಂಬದ ಸದಸ್ಯರಾಗಿ ಎಂದು ಮೋದಿ ಹೇಳಿದರು.
ಪ್ರತಿ ದೀಪಾವಳಿಯನ್ನು ಗಡಿ ಕಾಯುವ ಸೈನಿಕರೊಂದಿಗೆ ಆಚರಿಸಿದ್ದೇನೆ. ಇಂದಿನ ಭಾರತವು ಆತ್ಮನಿರ್ಭರ ಮತ್ತು ಸಶಕ್ತವಾಗಿದೆ. ನಮ್ಮ ರಕ್ಷಣಾ ಬಜೆಟ್‌ನ ಶೇ 65 ರಷ್ಟು ಭಾರತದಲ್ಲಿ ತಯಾರಿಸಿದ ರಕ್ಷಣಾ ಸಾಧನಗಳನ್ನು ಖರೀದಿಸಲು ವಿನಿಯೋಗಿಸಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿಯಲ್ಲಿ ನಾವು ಸುಧಾರಿತ ರಕ್ಷಣಾ ಸಾಧನಗಳನ್ನು ದೇಶೀಯವಾಗಿ ತಯಾರಿಸುತ್ತೇವೆ.
ಸ್ಟಾರ್ಟಪ್‌ಗಳೊಂದಿಗೆ ಯುವ ಭಾರತ ಪ್ರವರ್ಧಮಾನಕ್ಕೆ ಬರುತ್ತಿದೆ. ಶೀಘ್ರದಲ್ಲೇ ನಾವು ಪ್ರಮುಖ ರಕ್ಷಣಾ ರಫ್ತು ಮಾಡುವ ದೇಶವಾಗಿ ಹೊರಹೊಮ್ಮುತ್ತೇವೆ. ಮಹಿಳಾ ಯೋಧ ಸಂಖ್ಯೆ ಹೆಚ್ಚಾಗುತ್ತಿರುವುದು ಶ್ಲಾಘನೀಯ. ರಾಷ್ಟ್ರದ ಭದ್ರತೆಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹೊಸ ಎತ್ತರವನ್ನು ಮುಟ್ಟುತ್ತಿದೆ.
ಲಡಾಖ್‌ನಿಂದ ಅರುಣಾಚಲ ಪ್ರದೇಶ, ಜೈಸಲ್ಮೇರ್‌ನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಗಡಿ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸಿದೆ. ಇದು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸರ್ಜಿಕಲ್ ಸ್ಟ್ರೈಕ್‌ನ ಕೆಚ್ಚೆದೆಯರನ್ನು ಪ್ರಧಾನಿ ನೆನಪಿಸಿಕೊಂಡರು.
2014 ರಿಂದ ಪ್ರಧಾನಿ ನರೇಂದ್ರ ಮೋದಿ ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಇಂದು ಮುಂಜಾನೆ ಪ್ರಧಾನಿ ದೆಹಲಿಯಿಂದ ನೌಶೇರಾಗೆ ತೆರಳಿದಾಗ ಕನಿಷ್ಠ ಭದ್ರತಾ ವ್ಯವಸ್ಥೆಗಳು ಮಾತ್ರ ಇತ್ತು.