ಉಡುಪಿ: ರಾಜ್ಯೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸುವುದಕ್ಕಿಂತ ಮುಖ್ಯವಾಗಿ ಕನ್ನಡ ಭಾಷೆ ನಮ್ಮ ಅಂತರಂಗಕ್ಕಿಳಿಯಬೇಕು. ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಆಗ ರಾಜ್ಯೋತ್ಸವ ಆಚರಣೆ ಸಾರ್ಥಕವಾಗುತ್ತದೆ ಎಂದು ವಿದ್ವಾಂಸ ಸುಜಯೀಂದ್ರ ಹಂದೆ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಕನ್ನಡ ವಿಭಾಗ, ಸಾಂಸ್ಕೃತಿಕ ಸಂಘ, ಐ.ಕ್ಯೂ.ಎ.ಸಿ. ಹಾಗೂ ಸರಕಾರಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕನ್ನಡ ಕವಿಗಳು ಕನ್ನಡದ ಮಹತ್ವವನ್ನು ಸಾರಿದ ಹಲವು ಕನ್ನಡ ಗೀತೆಗಳನ್ನು ಅವರು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿ ಕನ್ನಡ ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಕಲಾವಿದ ಶಂಕರದಾಸ್ ಚಂಡ್ಕಳ ಕನ್ನಡ ಗೀತೆಗಳನ್ನು ಹಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಮುಖ್ಯ ಅತಿಥಿಗಳಾಗಿದ್ದರು.
ಕನ್ನಡ ಸಾಂಸ್ಕೃತಿಕ ರಸಪ್ರಶ್ನೆ, ಗೀತ ಗಾಯನ ಹಾಗೂ ಮಾತನಾಡುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಸ್ವಾಗತಿಸಿ, ರತ್ನಮಾಲಾ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಹಾರಾಡಿ ವಂದಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.