ನವದೆಹಲಿ: ಆಧುನಿಕ ಭಾರತವನ್ನು ಏಕೀಕರಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 146 ನೇ ಜನ್ಮದಿನದಂದು ದೇಶಾದ್ಯಂತ ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿಯ ಪಟೇಲ್ ಚೌಕ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಫೂರ್ತಿಯಿಂದ ಭಾರತವು ಬಾಹ್ಯ, ಆಂತರಿಕ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸಮರ್ಥವಾಗಿದೆ.
ಭಾರತವು ಕೇವಲ ಭೌಗೋಳಿಕ ಘಟಕವಲ್ಲ. ಉನ್ನತ ಆದರ್ಶಗಳು, ಪರಿಕಲ್ಪನೆಗಳು, ನಾಗರಿಕತೆ ಮತ್ತು ಸಂಸ್ಕೃತಿಯಿಂದ ಕೂಡಿದ ರಾಷ್ಟ್ರವಾಗಿದೆ. 135 ಕೋಟಿ ಭಾರತೀಯರು ವಾಸಿಸುವ ಭೂಮಿ ನಮ್ಮ ಆತ್ಮ, ಕನಸುಗಳು ಮತ್ತು ಆಕಾಂಕ್ಷೆಗಳ ಅವಿಭಾಜ್ಯ ಅಂಗವಾಗಿದೆ. ಸಮಾಜದಲ್ಲಿ ಅಭಿವೃದ್ಧಿ ಹೊಂದಿದ ಪ್ರಜಾಪ್ರಭುತ್ವದ ಭದ್ರ ಬುನಾದಿ, ಏಕ್ ಭಾರತ್ ಶ್ರೇಷ್ಠ ಭಾರತ ಎಂಬ ಭಾವನೆಯನ್ನು ವೃದ್ಧಿಸಿದೆ.
ಸರ್ದಾರ್ ಪಟೇಲ್ ಅವರು ಯಾವಾಗಲೂ ಭಾರತವು ಬಲಿಷ್ಠ, ಎಲ್ಲರನ್ನೂ ಒಳಗೊಳ್ಳುವ, ಸಂವೇದನಾಶೀಲ, ಸಭ್ಯ ಮತ್ತು ಅಭಿವೃದ್ಧಿ ಹೊಂದಬೇಕೆಂದು ಬಯಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಯಾವಾಗಲೂ ರಾಷ್ಟ್ರದ ಹಿತಾಸಕ್ತಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಸರ್ದಾರ್ ಪಟೇಲ್ ಅವರು ಇತಿಹಾಸದಲ್ಲಿ ಮಾತ್ರವಲ್ಲದೆ ಎಲ್ಲ ಭಾರತೀಯರ ಹೃದಯದಲ್ಲಿಯೂ ನೆಲೆಸಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ದೇಶವನ್ನು ಬಲಪಡಿಸಲು ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ, ದೇಶವು ಅನಗತ್ಯ ಹಳೆಯ ಕಾನೂನುಗಳನ್ನು ತೊಡೆದುಹಾಕಿದೆ, ಏಕತೆಯ ಆದರ್ಶಗಳನ್ನು ಬಲಪಡಿಸಿದೆ ಮತ್ತು ಸಂಪರ್ಕ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡಿದೆ.
ಸಾಮಾಜಿಕ, ಆರ್ಥಿಕ ಮತ್ತು ಸಾಂವಿಧಾನಿಕ ಏಕೀಕರಣದ ‘ಮಹಾಯಜ್ಞ’ವಾಗಿ ಏಕ ಭಾರತ- ಶ್ರೇಷ್ಠ ಭಾರತ ಭಾವನೆಯನ್ನು ಬಲಪಡಿಸಲಾಗುತ್ತಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಸಬ್ಕಾ ಪ್ರಯಾಸ್‌ನ ಶಕ್ತಿಯನ್ನು ಪ್ರಧಾನಿ ಪುನರುಚ್ಚರಿಸಿದರು. ಹೊಸ ಕೋವಿಡ್ ಆಸ್ಪತ್ರೆಗಳು, ಅಗತ್ಯ ಔಷಧಿಗಳು, 100 ಕೋಟಿ ಡೋಸ್ ಲಸಿಕೆಗಳು ಪ್ರತಿಯೊಬ್ಬ ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಸಾಧ್ಯವಾಯಿತು ಎಂದು ಪ್ರಧಾನಿ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದರು.