ಉಡುಪಿ: ದೇಶದ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ಅಭಿವೃದ್ದಿಗೆ ಭ್ರಷ್ಠಾಚಾರವು ಪ್ರಮುಖ ಅಡಚಣೆಯಾಗಿದ್ದು, ಇದರ ನಿರ್ಮೂಲನೆಯಿಂದ ದೇಶದ ಅಭಿವೃದ್ದಿ ಸಾಧ್ಯವಾಗಲಿದ್ದು, ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಎ ಹೇಳಿದರು.
ಅವರು ಇಂದು ಉಡುಪಿಯ ಅಬಕಾರಿ ಭವನದಲ್ಲಿ, ಜಾಗೃತ ಅರಿವು ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ, ಸಮಾಜದಲ್ಲಿ ಭ್ರಷ್ಠಾಚಾರ ಆಳವಾಗಿ ಬೇರೂರಿದ್ದು, ಕೆಟ್ಟ ಪಿಡುಗು ಆಗಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲಾ ನಾಗರೀಕರು, ಸರ್ಕಾರಿ ನೌಕರರು ಒಟ್ಟಾಗಿ ಕೆಲಸ ಮಾಡಬೇಕಿದೆ.
ನೌಕರರು ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೇ, ಸಕಾಲದಲ್ಲಿ, ಪ್ರಾಮಾಣಿಕವಾಗಿ ಮಾಡಿಕೊಡಬೇಕು. ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಮುಂದಿನ ಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶಪ್ರಾಯವಾಗಬೇಕು.
ಭ್ರಷ್ಠಾಚಾರ ಪ್ರಕರಣಗಳಲ್ಲಿ ಸಿಲುಕಿದರೆ ಮಾನಸಿಕ ಮತ್ತು ದೈಹಿಕ ಖಿನ್ನತೆ ಅನುಭವಿಸಬೇಕಾಗುತ್ತದೆ. ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಲೋಕಾಯುಕ್ತ ಸಂಸ್ಥೆಯೊಂದಿಗೆ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣದ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಉಡುಪಿ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕ ಜಗದೀಶ್ ಮಾತನಾಡಿ, ಎಲ್ಲಾ ಕಚೇರಿಗಳಲ್ಲಿ ಭ್ರಷ್ಠಾಚಾರ ಜಾಗೃತಿಯು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ವರ್ಷಪೂರ್ತಿ ಜಾಗೃತಿ ಮೂಡಬೇಕು.
ನೌಕರರು ಸಾರ್ವಜನಿಕರಿಂದ ದೂರುಗಳು ಬಾರದಂತೆ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತೆ ರೂಪಾ, ಉಡುಪಿ ಲೋಕಾಯುಕ್ತದ ಪೊಲೀಸ್ ನಿರೀಕ್ಷಕ ಜಯರಾಮ ಗೌಡ ಉಪಸ್ಥಿತರಿದ್ದರು.
ಅಬಕಾರಿ ನಿರೀಕ್ಷಕಿ ಶುಭದಾ ಸಿ ನಾಯಕ್ ಸ್ವಾಗತಿಸಿ, ಉಪನಿರೀಕ್ಷಕ ಶಿವಶಂಕರ್ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅಬಕಾರಿ, ಅರಣ್ಯ, ಉಡುಪಿ ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.