ಶಿರ್ವ: ದೇಶದಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಭ್ರಷ್ಟಾಚಾರ. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ, ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ‘ಜಾಗೃತಿ ಅರಿವು ಸಪ್ತಾಹ-2021’ ನಡೆಯಿತು.
ಪ್ರತಿಯೊಬ್ಬ ಪ್ರಜೆಯೂ ಯಾವುದೇ ಭ್ರಷ್ಟಾಚಾರಕ್ಕೆ ಒಳಪಡದೆ ಅಂಥವರ ವಿರುದ್ಧ ಹೋರಾಡಲು ಸೂಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ರಕ್ಷಣೆ, ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು.
ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾವಿಧಿಯನ್ನು ಕಾಲೇಜಿನ ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಹಿರಿಯ ಉಪನ್ಯಾಸಕರಾದ ವಿಠ್ಠಲ ನಾಯಕ್, ಐಕ್ಯೂಎಸಿ ಸಂಯೋಜಕ ಮೆಲ್ವಿನ್ ಕ್ಯಾಸ್ಟಲಿನೊ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.