ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್ ಲೈನ್-1098 ಉಡುಪಿಯ ವತಿಯಿಂದ ತೆರೆದ ಮನೆ ಕಾರ್ಯಕ್ರಮ ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸ್ಥಳೀಯ ನಗರಸಭಾ ಸದಸ್ಯರಾದ ಸಂತೋಷ್ ಜತ್ತನ್ ಉದ್ಘಾಟನೆ ನೆರವೇರಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬನ್ನಂಜೆ ಇಲ್ಲಿನ ವೈದ್ಯಾಧಿಕಾರಿ ಡಾ. ಹೇಮಂತ್, ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯವಂತೆ ತಿಳಿಸಿದರು. ಶಿಕ್ಷಣ ಇಲಾಖೆಯ ಬಿ.ಆರ್. ಪಿ. ಲಕ್ಷ್ಮೀ, ಕಡ್ಡಾಯ ಶಿಕ್ಷಣ ಮಹತ್ವದ ಬಗ್ಗೆ ಮಾತನಾಡಿದರು.
ಮಹಿಳಾ ಪೋಲಿಸ್ ಠಾಣೆ ಉಡುಪಿಯ ಠಾಣಾಧಿಕಾರಿ ಫೇಮಿನಾ, ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ “ಚೈಲ್ಡ್ ಲೈನ್-1098” ಅಥವಾ ಪೋಲಿಸ್ ತುರ್ತು ದೂರವಾಣಿ ಸಂಖ್ಯೆ “112”ಗೆ ಕರೆ ಮಾಡುವಂತೆ ತಿಳಿಸಿದರು.
ರೋಟರಿ ಉಡುಪಿ ಅಧ್ಯಕ್ಷರಾದ ಹೇಮಂತ್ ಯು ಕಾಂತ್, ತೆರೆದ ಮನೆ ಮಕ್ಕಳಿಗೆ ತಮ್ಮ ಸಮಸ್ಯೆಗಳನ್ನು ಸರಕಾರಿ ಅಧಿಕಾರಿಗಳ ಮುಂದಿಡಲು ಉತ್ತಮ ವೇದಿಕೆಯಾಗಿದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯುವರಾಜ್‌ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸಿಗುವಂತಹ ಸವಲತ್ತುಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಅನ್ವಯ ಕನ್ನಡ ಸಮೂಹ ಗಾಯನ ನಡೆಯಿತು. ಚೈಲ್ಡ್ ಲೈನ್-1098 ವತಿಯಿಂದ ಮಾಸ್ಕ್ ವಿತರಿಸಲಾಯಿತು. ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಹಾಗೂ ರೋಟರಿ ಉಡುಪಿಯ ಸಹಕಾರದಿಂದ ನೀಡಿದ ಲ್ಯಾಪ್‌ಟಾಪ್‌ನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.
ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಸುಲೋಚನಾ ಕೊಡವೂರು, ಚೈಲ್ಡ್ ಲೈನ್-1098 ಉಡುಪಿಯ ಸಹ ನಿರ್ದೇಶಕ ಗುರುರಾಜ್ ಭಟ್, ಮಹಿಳಾ ಪೋಲಿಸ್ ಠಾಣೆ ಉಡುಪಿ ಸಿಬ್ಬಂದಿಗಳಾದ ಜ್ಯೋತಿ ನಾಯಕ್, ಅರುಣ ಟಿ.ಸಿ. ಮತ್ತು ಸಾವಿತ್ರಿ ಶಂಶಿ, ಅಂಗನವಾಡಿ ಮೇಲ್ವಿಚಾರಕಿ ಸಿಂಧು, ಅಂಗನವಾಡಿ ಕಾರ್ಯಕರ್ತೆಯವರಾದ ಸುಮತಿ, ಆಶಾ ಕಾರ್ಯಕರ್ತೆಯವರು, ಚೈಲ್ಡ್ ಲೈನ್-1098ಯ ಸ್ವಯಂ ಸೇವಕರಾದ ತಿಲೋತ್ತಮ ನಾಯಕ್, ಸ್ಥಳೀಯರು, ಮಕ್ಕಳು, ಶಿಕ್ಷಕ ವೃಂದದವರು ಮತ್ತು ಚೈಲ್ಡ್ ಲೈನ್-1098ನ ಸದಸ್ಯರು ಉಪಸ್ಥಿತರಿದ್ದರು.
ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ರಮಣಿ ವಂದಿಸಿದರು. ಚೈಲ್ಡ್ ಲೈನ್-1098 ಉಡುಪಿ ಆಪ್ತ ಸಮಾಲೋಚಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.