ಹಿರಿಯಡ್ಕ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ವಿಶ್ವದಲ್ಲೇ ಮಾದರಿಯಾಗಿರುವ ಉಚಿತ ಆರೋಗ್ಯ ಸೇವೆ, ರೈತ ಸಮ್ಮಾನ್ ಯೋಜನೆ ಮೂಲಕ ದೇಶದ ರೈತರ ಖಾತೆಗೆ ನೇರ ನಗದು ವರ್ಗಾವಣೆ ಸಹಿತ ಹಲವಾರು ಜನಪರ ಯೋಜನೆಗಳ ಜೊತೆಗೆ ದೇಶದ ಸಮಗ್ರತೆ ಮತ್ತು ಅಖಂಡತೆಗೆ ವಿಶೇಷ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವವಂದ್ಯರೆನಿಸಿದ್ದಾರೆ. ಇಂದು ದೇಶ ಸಮರ್ಥ ನಾಯಕನ ಆಡಳಿತದಲ್ಲಿ ಸುಭದ್ರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಕಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಿರಿಯಡ್ಕದ ದೇವಾಡಿಗರ ಸಭಾಭವನದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾರ್ಥಕ ಸೇವೆ ನೀಡುವ ಸದುದ್ದೇಶದಿಂದ ಬಿಜೆಪಿ ಜನಸಂಘದ ಮೂಲಕ ಜನ್ಮತಾಳಿದೆ. ಇತರ ರಾಜಕೀಯ ಪಕ್ಷಗಳಂತೆ ಬಿಜೆಪಿ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಕೆಲಸ ಮಾಡದೆ, ನಿರಂತರ ಜನ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಲುವಾಗಿ ಸೇವೆ ಮತ್ತು ಸಮರ್ಪಣ ಅಭಿಯಾನದಡಿ ಸೆ.17ರಿಂದ ಅ.7ರ ವರೆಗೆ ದೇಶದಾದ್ಯಂತ ದಾಖಲೆ ಮಟ್ಟದ ಸೇವಾ ಕಾರ್ಯಗಳು ನಡೆದಿವೆ.
ಉಡುಪಿ ಜಿಲ್ಲೆಯಲ್ಲಿಯೂ ರಾಜ್ಯಕ್ಕೆ ಮಾದರಿ ಎಂಬ ರೀತಿಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ, ಸ್ವಚ್ಛತಾ ಅಭಿಯಾನ, ಸಸಿ ನೆಡುವ ಅಭಿಯಾನ ಇತ್ಯಾದಿ ಹಲವಾರು ಸೇವಾ ಕಾರ್ಯಗಳು ದೊಡ್ಡ ಮಟ್ಟದಲ್ಲಿ ನಡೆದು ಜನ ಮೆಚ್ಚುಗೆ ಗಳಿಸಿವೆ ಎಂದರು.
ಇಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಾದ್ಯಂತ 100 ಕೋಟಿ ಡೋಸ್ ಉಚಿತ ಕೋವಿಡ್ ಲಸಿಕೆ ವಿತರಣೆಯಾಗಿರುವುದು ವಿಶ್ವದಾಖಲೆ ಎನಿಸಿದೆ. ವಿಶ್ವದ ಅನೇಕ ರಾಷ್ಟ್ರಗಳು ಕೋವಿಡ್ ಸಂಕಷ್ಟದಿಂದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತತ್ತರಿಸಿದ್ದರೂ, ಭಾರತ ಎಲ್ಲಾ ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಪ್ರಗತಿ ಪಥದತ್ತ ಸಾಗುತ್ತಿದೆ. ಇದಕ್ಕೆ ಕಾರಣರಾಗಿರುವ ಪ್ರಧಾನಿ ಮೋದಿಯವರಿಗೆ ದೇಶವಾಸಿಗಳು ವಂದನೆಯನ್ನು ಸಲ್ಲಿಸಬೇಕಾಗಿದೆ.
ಕಣ್ಣುಗಳು ನಮ್ಮ ದೇಹದ ಅಮೂಲ್ಯ ಅಂಗ. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡಕ ಯಾವ ರೀತಿಯಲ್ಲಿ ಹಾಸುಹೊಕ್ಕಾಗಿದೆ ಎನ್ನುವುದು ಅದರ ಬಳಕೆದಾರ ಜನತೆಗೆ ಚೆನ್ನಾಗಿ ತಿಳಿದಿದೆ. ಇಂದು ಉತ್ತಮ ಗುಣಮಟ್ಟದ ಕನ್ನಡಕವನ್ನು ಉಚಿತವಾಗಿ ವಿತರಿಸುವ ಮೂಲಕ ಬಿಜೆಪಿ ಜನತೆಯ ನಿತ್ಯ ಬದುಕಿನ ಸಂಕಷ್ಟಕ್ಕೆ ಒಂದು ರೀತಿಯಲ್ಲಿ ಸ್ಪಂದಿಸಿದಂತಾಗಿದೆ. ಈ ಸೌಲಭ್ಯ ಫಲಾನುಭವಿಗಳ ನಿತ್ಯೋಪಯೋಗಕ್ಕೆ ಸಹಕಾರಿಯಾಗಲಿ ಎಂದು ಹೇಳಿದರು.
ನೇತ್ರತಜ್ಞ ಡಾ. ಕೃಷ್ಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿ, ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ನಡೆಯುತ್ತಿರುವ ಉಚಿತ ಆರೋಗ್ಯ ಮತ್ತು ಕಣ್ಣಿನ ಶಿಬಿರಗಳ ಆಯೋಜನೆಯನ್ನು ಪ್ರಶಂಶಿಸಿದರು.
ಜಿಲ್ಲೆಯಾದ್ಯಂತ ಅನೇಕ ಉಚಿತ ಕಣ್ಣಿನ ತಪಾಸಣಾ ಶಿಬಿರ, ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆಗೆ ಸಹಕರಿಸಿರುವ ಡಾ. ಕೃಷ್ಣಪ್ರಸಾದ್ ರವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ನೇತ್ರ ತಪಾಸಣಾ ಶಿಬಿರದ 346 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಬಿಜೆಪಿ ಹಿರಿಯ ಕಾರ್ಯಕರ್ತ ವಿಶ್ವಾಸ್ ಭಟ್, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿಜೇತ್ ಕುಮಾರ್ ಬೆಳ್ಳರ್ಪಾಡಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಸ್ವಾಗತಿಸಿ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ. ವಿದ್ಯಾಧರ ಶೆಟ್ಟಿ ವಂದಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.