ಉಡುಪಿ: ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಉಡುಪಿ ಪ್ರೆಸ್ ಕ್ಲಬ್ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ನಾಡು, ನುಡಿಯನ್ನು ಪ್ರತಿಬಿಂಬಿಸುವ ಕನ್ನಡ ರಾಜ್ಯೋತ್ಸವ ವಿಶೇಷ ಅಂಚೆಚೀಟಿಗಳ ಪ್ರದರ್ಶನ ಮತ್ತು ಸುಮಾರು ನಾಲ್ಕು ದಶಕಗಳ ಕಾಲ ಅಂಚೆಚೀಟಿ ಸಂಗ್ರಹ ಮಾಡುತ್ತಿರುವ ಕಲ್ಯಾಣಪುರ ಲಕ್ಷ್ಮೀನಾರಾಯಣ ನಾಯಕ್ ಅವರಿಗೆ ಸನ್ಮಾನ ಕಾರ್ಯಕ್ರಮ ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀನಾರಾಯಣ ನಾಯಕ್, ಅಂಚೆಚೀಟಿಯಲ್ಲಿ ದೇಶದ ಶ್ರೀಮಂತ ಇತಿಹಾಸ ಅಡಗಿದೆ. ಸಂಗ್ರಹ ಎಂದರೆ ಅದೊಂದು ಸಮಗ್ರ ಅಧ್ಯಯನ ಮಾಡಿದ ಹಾಗೆ ಆಗುತ್ತದೆ.
ಸುಮಾರು ನಾಲ್ಕು ದಶಕಗಳಿಂದ ವಿವಿಧ ದೇಶಗಳ ಅಂಚೆಚೀಟಿ, ನಾಣ್ಯ, ನೋಟುಗಳನ್ನು ಸಂಗ್ರಹ ಮಾಡುತ್ತಿದ್ದೇನೆ.
ಶಂಕರಪುರ ಮಲ್ಲಿಗೆ, ಕವಿ ಮುದ್ದಣ್ಣ, ಪ್ರಾಚೀನ ಶೈಕ್ಷಣಿಕ ಸಂಸ್ಥೆ, ಧಾರ್ಮಿಕ ಕೇಂದ್ರಗಳ ಅಂಚೆಚೀಟಿಗಳು ಒಳಗೊಂಡ
ಕನ್ನಡ ನಾಡು ನುಡಿಗೆ ಸಂಬಂಧಿಸಿದ ಅಪರೂಪದ ಅಂಚೆಚೀಟಿಗಳಿವೆ.
ಯುವಜನರು ಇಂತಹ ಹವ್ಯಾಸಗಳನ್ನು ಬೆಳೆಸಿಕೊಂಡರೆ ವ್ಯಕ್ತಿತ್ವ ವಿಕಸನ ಆಗುವ ಜತೆಗೆ ಆಳವಾದ ಅಧ್ಯಯನ ಸಾಧ್ಯ ಎಂದರು.
ವಾರ್ತಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು. ಉಡುಪಿ ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಸ್ವಚ್ಛ ಭಾರತ್ ಫ್ರೆಂಡ್ಸ್ ಹಿರಿಯ ಸದಸ್ಯರಾದ ಜಗದೀಶ್ ಶೆಟ್ಟಿ, ವೀಕ್ಷಿತ್, ರಾಘವೇಂದ್ರ ಪ್ರಭು ಕರ್ವಾಲು, ನಾಗರಾಜ್ ಕಿದಿಯೂರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ್ ಫ್ರೆಂಡ್ಸ್ ಸದಸ್ಯ ಗಣೇಶ್ ಪ್ರಸಾದ್ ಸ್ವಾಗತಿಸಿ ನಿರೂಪಿಸಿದರು.