ಉಡುಪಿ ಬುಲೆಟಿನ್ ವಿಶೇಷ ವರದಿ: “ಒಂದು ಐಡಿಯಾವನ್ನು ಕೈಗೆತ್ತಿಕೊಳ್ಳಿ, ಬಳಿಕ ಆ ಐಡಿಯಾದ ಬಗ್ಗೆಯೇ ಆಲೋಚಿಸಿ, ಕನಸನ್ನು ಕಾಣುತ್ತಿರಿ. ನಿಮ್ಮ ಇಡೀ ಶರೀರದಲ್ಲಿ ಆ ಐಡಿಯಾವನ್ನು ತುಂಬಿಕೊಳ್ಳಿ. ಯಶಸ್ಸಿಗೆ ಇದೇ ದಾರಿ” ಎಂದು ಸ್ವಾಮಿ ವಿವೇಕಾನಂದರು ಆಗಾಗ್ಗೆ ಹೇಳುತ್ತಿದ್ದರು. ಇದನ್ನೇ ಕಾರ್ಯಗತವನ್ನಾಗಿಸಿದ ಯಶಸ್ವಿ ಅಂಚೆ ಚೀಟಿ, ನಾಣ್ಯ ಸಂಗ್ರಹಕಾರರ ಯಶೋಗಾಥೆ ಇಲ್ಲಿದೆ.
ಕಲ್ಯಾಣಪುರ ನಿವಾಸಿ ಲಕ್ಷ್ಮೀನಾರಾಯಣ ನಾಯಕ್ ಕಳೆದ ನಾಲ್ಕು ದಶಕಗಳಿಂದ ಅಂಚೆ ಚೀಟಿ, ನಾಣ್ಯ ಸಂಗ್ರಹವನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರ ಬಳಿ 185 ದೇಶಗಳ ಅಂಚೆ ಚೀಟಿ, 160 ದೇಶಗಳ ನಾಣ್ಯ ಹಾಗೂ 160 ದೇಶಗಳ ನೋಟುಗಳಿವೆ.
ಕಲ್ಯಾಣಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ಕೇಳುವಾಗ ಅಧ್ಯಾಪಕರ ಪ್ರೇರಣೆಯಿಂದ ಮೊದಲ ಬಾರಿಗೆ ಅಂಚೆ ಚೀಟಿ ಸಂಗ್ರಹಕ್ಕೆ ಕೈ ಹಾಕಿದ ಲಕ್ಷ್ಮೀನಾರಾಯಣ ನಾಯಕ್ ಬಳಿಕ ಹಿಂದಿರುಗಿ ನೋಡಲಿಲ್ಲ. ತಂದೆಯವರು ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಅವರೂ ಕೂಡ ಪುತ್ರನಿಗೆ ಪ್ರೇರಣೆ ನೀಡುತ್ತಿದ್ದರು.
ಅಂದು ಮೊಬೈಲ್ ಇಲ್ಲದ ಸಮಯದಲ್ಲಿ ಅಂಚೆ ಚೀಟಿ ಸಂಗ್ರಹದಿಂದಲೇ ಮನೋರಂಜನೆ ಸಿಗುತ್ತಿತ್ತು ಎಂದು ಲಕ್ಷ್ಮೀನಾರಾಯಣ ಹೇಳುತ್ತಾರೆ. ತನ್ನ ಪಾಕೆಟ್ ಮನಿಯನ್ನು ಇದೇ ಹವ್ಯಾಸಕ್ಕಾಗಿ ಮೀಸಲಿಟ್ಟ ಇವರು, ದೇಶದ ಮೂಲೆಮೂಲೆಗಳಿಂದ ಸರಕಾರ ವಿಶೇಷ ಸಂದರ್ಭಗಳಲ್ಲಿ ಹೊರತಂದ ನಾಣ್ಯ, ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ವಿಶೇಷ ಸಂಗ್ರಹ: ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿ ಎಂಬಂತೆ ಇವರ ಬಳಿ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಶೇಷ ಸಂಗ್ರಹವಿದೆ. ರಾಜ್ಯ ಸರಕಾರ ವಿವಿಧ ಸಾಧಕರ ಬಗ್ಗೆ, ಪ್ರವಾಸಿ ಸ್ಥಳಗಳ ಬಗ್ಗೆ, ಶ್ರದ್ಧಾಕೇಂದ್ರಗಳ ಇತ್ಯಾದಿ ರಾಜ್ಯದ ನೆಲ ಜಲ, ಸಂಸ್ಕೃತಿಗೆ ಸಂಬಂಧಿಸಿದ 95 ಅಂಚೆ ಚೀಟಿಗಳ ಪೈಕಿ ಲಕ್ಷ್ಮೀನಾರಾಯಣ ನಾಯಕ್ ಅವರ ಬಳಿ 87 ಅಂಚೆ ಚೀಟಿಗಳ ಬೃಹತ್ ಸಂಗ್ರಹವೇ ಇದೆ.
ನಿಸ್ವಾರ್ಥ ಮನೋಭಾವ: ಈವರೆಗೆ ಶಾಲಾ ಕಾಲೇಜುಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಇವರು ಯಾವುದೇ ಸಂಭಾವನೆ ಪಡೆಯುವುದಿಲ್ಲ ಅಥವ ಬೇಡಿಕೆ ಕೂಡ ಇಡುವುದಿಲ್ಲ.
ಯಾರಾದರೂ ಪ್ರೋತ್ಸಾಹಿಸಿದರೆ ಅದೇ ನನ್ನ ಹವ್ಯಾಸಕ್ಕೆ ಇಂಧನ ಎಂದು ಹೇಳುವ ಇವರು, ಎಲ್ಲಾ ಪರಿಕರಗಳನ್ನು ಹೊತ್ತುತಂದು ತನ್ನ ಪ್ರದರ್ಶನ ನಡೆಸಿ ಸಾರ್ವಜನಿಕರಿಗೆ ಮನಮುಟ್ಟುವಂತೆ ವಿವರಿಸುತ್ತಾರೆ. ಇದರಲ್ಲಿಯೇ ನನಗೆ ಸಂತೃಪ್ತಿಯಿದೆ ಎಂದು ನಗುತ್ತಲೇ ಹೇಳುವ ಲಕ್ಷ್ಮೀನಾರಾಯಣ ನಾಯಕ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸೋಣ.