ನಮ್ಮ ಉಡುಪಿ ಬುಲೆಟಿನ್ ವಿಶೇಷ ವರದಿ: ಸಣ್ಣಪುಟ್ಟ ಪಾದಯಾತ್ರೆಗಳನ್ನು ಈಗಾಗಲೇ ನೀವು ನೋಡಿರಬಹುದು. ಮನೆಯಿಂದ ಶ್ರದ್ಧಾಕೇಂದ್ರಗಳಿಗೆ ಪಾದಯಾತ್ರೆ, ರಾಜಕೀಯ ಪಕ್ಷಗಳ ಪಾದಯಾತ್ರೆಗಳು ಈ ರೀತಿ ಭಿನ್ನ ಭಿನ್ನ ಉದ್ದೇಶಗಳನ್ನಿಟ್ಟುಕೊಂಡು ಪಾದಯಾತ್ರೆ ಸಂಘಟಿಸುತ್ತಾರೆ.
ಆದರೆ ಇಲ್ಲೊಬ್ಬ ನವತರುಣ ಏಕಾಂಗಿಯಾಗಿ ಕರ್ನಾಟಕದಿಂದ ಕಾಶ್ಮೀರಕ್ಕೆ ಸುಮಾರು ಮೂರು ಸಾವಿರ ಕಿಮೀ ಕಾಲ್ನಡಿಗೆಯಲ್ಲೇ ಸಂಚರಿಸುತ್ತಿದ್ದಾನೆ. ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ದೇಶಾದ್ಯಂತ ಪರಿಚಯಿಸಬೇಕು ಎಂಬುದು ಇವರ ಪರಿಕ್ರಮದ ಉದ್ದೇಶ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹರ್ಷೇಂದ್ರ ಆಚಾರ್ಯ ಈ ಮಹತ್ಕಾರ್ಯ ಮಾಡುತ್ತಿರುವ ಅದಮ್ಯ ಆತ್ಮವಿಶ್ವಾಸದ ಯುವಕ. ‘ನಮ್ಮ ಉಡುಪಿ ಬುಲೆಟಿನ್’ ಜೊತೆಗೆ ಮಾತನಾಡಿದ ಹರ್ಷೇಂದ್ರ, ತನ್ನ ಕನಸಿನ ಯಾತ್ರೆಯನ್ನು ಬಿಚ್ಚಿಟ್ಟಿದ್ದಾರೆ. ಅವರ ಮಾತಿನ ಸಂಪೂರ್ಣ ವಿವರಗಳನ್ನು ವಿಶೇಷ ವರದಿಯ ರೂಪದಲ್ಲಿ ನೀಡಲಾಗಿದೆ.
ಸೆಪ್ಟೆಂಬರ್ 19 ರಂದು ಬ್ರಹ್ಮಾವರ ಬಸ್ ನಿಲ್ದಾಣದಿಂದ ತನ್ನ ಪಾದಯಾತ್ರೆ ಆರಂಭಿಸಿದ ಹರ್ಷೇಂದ್ರ, ಅಂದಿನಿಂದ ನಿರಂತರವಾಗಿ ಪ್ರತಿದಿನ ಸರಾಸರಿ 50 ಕಿಮೀ ಕಾಲ್ನಡಿಗೆಯಲ್ಲಿಯೇ ಕ್ರಮಿಸಿ ರಾತ್ರಿ ಟೆಂಟ್ ನಿರ್ಮಿಸಿ ವಿಶ್ರಾಂತಿ ಪಡೆಯುತ್ತಾರೆ.
ಪ್ರವಾಸ ಎಂಬುವುದು ಜೀವನದ ಅವಿಭಾಜ್ಯ ಅಂಗವಾದರೆ ಮಾತ್ರ ಹೊಸ ಕಲಿಕೆ ಸಾಧ್ಯ. ಇಟ್ಟ ಗುರಿಯನ್ನು ಈಡೇರಿಸುವ ನಂಬಿಕೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ಬಗ್ಗೆ ಕೀಳರಿಮೆ ಮೊದಲು ತೊಡೆದು ಹಾಕಬೇಕು ಎಂದು ಹರ್ಷೇಂದ್ರ ಹೇಳುತ್ತಾರೆ.
ಮುಂಜಾನೆ 6 ಗಂಟೆಗೆ ಎದ್ದು ಸುಮಾರು 6.30ಕ್ಕೆ ತನ್ನ ಮುಂದಿನ ಗುರಿಯನ್ನು ತಲುಪಲು ಅಣಿಯಾಗುವ ಹರ್ಷೇಂದ್ರ ತನ್ನ ಕಾಲ್ನಡಿಗೆಯ ಸಂಪೂರ್ಣ ವಿವರಗಳನ್ನು ವಿಡಿಯೋ ಮೂಲಕ ದಾಖಲೀಕರಿಸಿ ಯೂಟ್ಯೂಬ್ ನಲ್ಲಿ ಪ್ರಕಟಿಸಿ ತನ್ನ ಅಭಿಮಾನಿಗಳಿಗೆ ಅಪ್ಡೇಟ್ ಆಗಿ ಇಡುತ್ತಾರೆ.
ಬಜೆಟ್ ಟ್ರಾವೆಲ್: ಬಜೆಟ್ ಟ್ರಾವೆಲ್ ಎಂಬುದು ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಹಿತಮಿತವಾಗಿ ಇಡಿ ಪ್ರವಾಸವನ್ನು ಯೋಜನಾಬದ್ಧವಾಗಿ ನಡೆಸುವುದೇ ಬಜೆಟ್ ಟ್ರಾವೆಲ್. ಪ್ರತಿದಿನ ಲಾಡ್ಜ್ ಗಳಲ್ಲಿ ಉಳಿದುಕೊಂಡರೆ ಕಾಶ್ಮೀರದವರೆಗೆ ಸಾವಿರಾರು ರೂ ಖರ್ಚಾಗುವುದನ್ನು ತಪ್ಪಿಸಲು ಹರ್ಷೇಂದ್ರ ಅವರು ಟೆಂಟ್ ನಿರ್ಮಿಸಿಯೇ ತಂಗುತ್ತಾರೆ.
ಕೆಲವೊಮ್ಮೆ ಇವರ ಪಾದಾಯತ್ರೆಯ ಬಗ್ಗೆ ಮಾಹಿತಿ ಪಡೆದು ಸ್ಥಳೀಯರೇ ಇವರಿಗೆ ಉಚಿತ ವಸತಿ ಹಾಗೂ ರಾತ್ರಿ ಭೂಜನದ ವ್ಯವಸ್ಥೆಯನ್ನೂ ನೋಡಿಕೊಳ್ಳುತ್ತಾರೆ. ಇತರೆ ಖರ್ಚುಗಳನ್ನು ಹರ್ಷೇಂದ್ರರವರೇ ನೋಡಿಕೊಳ್ಳಬೇಕು.
ತುಳುನಾಡಿನ ಸೆಳೆತ: ಅಂದ ಹಾಗೆ ಹರ್ಷೇಂದ್ರ ಯಾವುದೇ ಕಂಪನಿಯ ಉದ್ಯೋಗಿಯಲ್ಲ. ಈಗಷ್ಟೇ ತನ್ನ ಪದವಿ ಶಿಕ್ಷಣವನ್ನು ಪೂರೈಸಿದ ಹರ್ಷೇಂದ್ರರಿಗೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಸೆಳೆತ ಉಂಟಾಗಿ ಇದನ್ನು ದೇಶಾದ್ಯಂತ ಪರಿಚಯಿಸಬೇಕು ಎಂಬ ಮಹಾನ್ ಉದ್ದೇಶದಿಂದ ’ಕರ್ನಾಟಕ ಟು ಕಾಶ್ಮೀರ’ ಪಾದಯಾತ್ರೆ ಹೊರಟಿದ್ದಾರೆ.
ತುಳುನಾಡಿನ ದೇವ ದೈವಗಳ ಬಗ್ಗೆ, ಇಲ್ಲಿಯ ಗ್ರಾಮೀಣ ಸೊಗಡು, ಆಚಾರ ವಿಚಾರ, ಆಹಾರ ಇತ್ಯಾದಿಗಳ ಬಗ್ಗೆ ಹೋದಲೆಲ್ಲಾ ಹಿಂದಿ, ಆಂಗ್ಲ ಭಾಷೆಯಲ್ಲಿ ವಿವರಿಸುವ ಹರ್ಷೇಂದ್ರ ಪ್ರತಿದಿನ ಯೂಟ್ಯೂಬ್ ನಲ್ಲಿ ತುಳು, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಸುಲಲಿತವಾಗಿ ಮಾತನಾಡಿ ತನ್ನ ದಿನನಿತ್ಯದ ಅಪ್ಡೇಟ್ಸ್ ಗಳನ್ನು ನೀಡುತ್ತಾರೆ.
ವ್ಯವಸ್ಥಿತ ಯೋಜನೆ: ಪ್ರತಿದಿನ ಇಷ್ಟೇ ಗಂಟೆಗೆ ಏಳಬೇಕು, ದಾರಿ ಮಧ್ಯದಲ್ಲಿ ಸಮಯ ಸಿಕ್ಕಾಗ ವಿಡಿಯೋ ಚಿತ್ರೀಕರಣ, ಹಿತಮಿತ ಮತ್ತು ಪಾದಯಾತ್ರೆಗೆ ಇಂಧನ ನೀಡುವ ಆಹಾರ ಈ ರೀತಿ ಯೋಜನಾಬದ್ಧವಾಗಿ ನಡೆಯುತ್ತಿದೆ ಪಾದಯಾತ್ರೆ.
ಬೆಳಿಗ್ಗೆ 6.30 ರ ಒಳಗೆ ಹರ್ಷೇಂದ್ರ ಅವರ ಪಾದಯಾತ್ರೆ ಆರಂಭವಾದರೆ ಮತ್ತೆ ಮುಕ್ತಾಯಗೊಳ್ಳುವುದು 50ಕಿಮೀ ಕ್ರಮಿಸಿದ ನಂತರವೇ. 50ಕ್ಕಿಂತ ಹೆಚ್ಚು ಕಿಮೀ ಕ್ರಮಿಸುವ ಗುರಿ ಹೊಂದಿದರೆ ಅಂದು ಬೇಗನೇ ಎದ್ದು ತನ್ನ ಕಾಲ್ನಡಿಗೆಯನ್ನು ಇವರು ಆರಂಭಿಸುತ್ತಾರೆ.
ಸಂಜೆ 7.30 ಹೊತ್ತಿಗೆ ಆ ದಿನದ ವಸತಿಯ ಬಗ್ಗೆ ಒಂದು ಸ್ಪಷ್ಠ ಚಿತ್ರಣ ಸಿಗುತ್ತದೆ. ಮಾರ್ಗ ಮಧ್ಯದಲ್ಲಿ ಪ್ಯಾಕೇಜ್ಡ್ ನೀರನ್ನೇ ಕುಡಿಯುವ ಹರ್ಷೇಂದ್ರ ತನ್ನ ಆರೋಗ್ಯದ ಬಗ್ಗೆ ಬಹಳ ಕಾಳಜಿಯನ್ನು ವಹಿಸಿಕೊಂಡಿದ್ದಾರೆ.
ಹರ್ಷೇಂದ್ರರ ದೇಹದ ತೂಕ 65 ಕೆಜಿ. ಹರ್ಷೇಂದ್ರ ಹೊತ್ತು ಹೆಜ್ಜೆ ಹಾಕುವ ಬ್ಯಾಗ್ 15 ಕೆಜಿ! ಈ ಬ್ಯಾಗಿನಲ್ಲಿ ಟೆಂಟ್ ಹಾಕಲು ಬೇಕಾದ ಪರಿಕರಗಳು, ಟಾರ್ಚ್, ಮೊಬೈಲ್ ಚಾರ್ಜ್ ಮಾಡುವ ಪವರ್ ಬ್ಯಾಂಕ್, ಬಟ್ಟೆ ಹಾಗೂ ತುರ್ತು ಔಷಧಿಗಳ ಜೊತೆಗೆ ಅಗತ್ಯ ದಾಖಲೆಗಳು ಕೂಡ ಇವೆ.
ರಾಜಸ್ಥಾನದಲ್ಲಿ ದೀಪಾವಳಿ: ದೀಪಾವಳಿಯ ಸಂದರ್ಭದಲ್ಲಿ ರಾಜಸ್ಥಾನ ಹಾದು ಹೋಗಲಿರುವ ಹರ್ಷೇಂದ್ರ ಇತರೆ ಸ್ಥಳಗಳನ್ನು ಸಂದರ್ಶಿಸಲು ಮತ್ತು ಅಲ್ಲಿಯ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಸಲುವಾಗಿ ಕೆಲವು ದಿನ ರಾಜಸ್ಥಾನದಲ್ಲಿ ತಿರುಗಾಡಲಿದ್ದಾರೆ. ಈ ಬಗ್ಗೆ ಹರ್ಷೇಂದ್ರ ಅವರು ಬಹಳ ಉತ್ಸಾಹದಲ್ಲಿದ್ದಾರೆ.
ಉತ್ತಮ ಸಂವಹನವೇ ಪ್ಲಸ್ ಪಾಯಿಂಟ್: ಅಪರಿಚಿತ ಸ್ಥಳಗಳಲ್ಲಿ ಹೇಗೆ ಮ್ಯಾನೇಜ್ ಮಾಡುವಿರಿ ಎಂಬ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ ಹರ್ಷೇಂದ್ರ, ಇದ್ದದ್ದನ್ನು ಇದ್ದ ಹಾಗೆ ಹೇಳುವುದು, ನಯವಿನಯದಿಂದ ಮಾತನಾಡುವುದು, ಎಲ್ಲರೂ ಒಪ್ಪಿಕೊಳ್ಳುವ ವ್ಯಕ್ತಿತ್ವ ನನ್ನ ಹುಟ್ಟುಗುಣ. ಇದೇ ಕಾರಣದಿಂದ ಹೋದಲ್ಲೆಲ್ಲಾ ಒಂದಿಷ್ಟು ಮಂದಿ ನನ್ನ ಆತ್ಮೀಯರ ಪಟ್ಟಿಯಲ್ಲಿ ಸೇರುತ್ತಾರೆ. ಹಲವಾರು ಮಂದಿ ಹರ್ಷೇಂದ್ರರಿಗೆ ಇಲ್ಲಿಯವರೆಗೆ ಆತಿಥ್ಯ ನೀಡಿದ್ದಾರೆ.
ತುಳುನಾಡಿನ ಹೆಜ್ಜೆ ಗುರುತು: ಮುಂಬಯಿಯ ಇಂಡಿಯಾ ಗೇಟ್, ಗುಜರಾತಿನ ಇತರ ಪ್ರಮುಖ ಸ್ಥಳಗಳು, ಮಹಾರಾಷ್ಟ್ರದ ಕೆಲವು ಐತಿಹಾಸಿಕ ಕೋಟೆ ಹೀಗೆ ಪ್ರಮುಖ ಸ್ಥಳಗಳಲ್ಲಿ ತುಳುನಾಡಿನ ಚಿಹ್ನೆ, ಧ್ವಜವನ್ನು ಇಟ್ಟು ಹರ್ಷೇಂದ್ರ ಚಿತ್ರೀಕರಣ ಮಾಡಿ ಅಲ್ಲಿಯವರೆಗೆ ತುಳುನಾಡಿನ ಸಂಸ್ಕೃತಿಯ ರಸದೌತಣ ನೀಡಿದ್ದಾರೆ.
ಹೀಗಿತ್ತು ತಯಾರಿ: ಸಾವಿರಾರು ಕಿಮೀ ನಡೆಯುವುದು ಅಂದರೆ ಸುಲಭದ ಮಾತಲ್ಲ. ಇದಕ್ಕೆ ಹರ್ಷೇಂದ್ರ ಅವರು ಎರಡು ತಿಂಗಳ ಹಿಂದೆಯೇ ತಯಾರಿ ನಡೆಸಿದ್ದರು. ಪ್ರತಿದಿನ 10-15 ಕಿಮೀ ಕ್ರಮಿಸಿ ಪೂರ್ವ ತಯಾರಿ ನಡೆಸಿದ್ದರು. ಮಾನಸಿಕವಾಗಿ ಕೂಡ ಗಟ್ಟಿಯಾಗುವುದು ಪಾದಯಾತ್ರೆಯ ಒಂದು ಭಾಗ ಎನ್ನುವ ಹರ್ಷೇಂದ್ರ, ಬೆಟ್ಟದಷ್ಟು ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಯಾವುದೇ ಜಟಿಲ ಪರಿಸ್ಥಿತಯನ್ನು ಸಮರ್ಥವಾಗಿ ಎದುರಿಸುವೆ ಎಂದು ಹೇಳುವ ಇವರು, ಕಾಶ್ಮೀರ ತಲುಪುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯ: ಹರ್ಷೇಂದ್ರ ಇವರು ಜಾವಾ ಯೆಜ್ದಿ ಮೋಟರ್ ಕ್ಲಬ್, ಕೋಸ್ಟಲ್ ರೆಟ್ರೋ ಇಂಡಿಯನ್ ಸ್ಕೂಟರ್ ಕ್ಲಬ್, ಶ್ರದ್ಧಾ ಸ್ಪೋರ್ಟ್ಸ್ ಕ್ಲಬ್, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಇವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮಹೋನ್ನತ ಕನಸನ್ನು ಹೊತ್ತುಕೊಂಡು ಕರ್ನಾಟದಿಂದ ಕಾಶ್ಮೀರದವರೆಗೆ ನಿಸ್ವಾರ್ಥ ಮನೋಭಾವದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಡು ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿಯೇ ಹೊರಟಿರುವ ಹರ್ಷೇಂದ್ರರನ್ನು ಸಂಪರ್ಕಿಸಿ, ಅಭಿನಂದಿಸಿ ಪ್ರೋತ್ಸಾಹಿಸಿ. ಅವರ ಮೊಬೈಲ್ ಸಂಖ್ಯೆ 8660986568, 7090883854.
ಪಾದಯಾತ್ರೆಯ ಸಂಪೂರ್ಣ ವಿಡಿಯೋ ವಿವರಗಳಿಗಾಗಿ ಹರ್ಷೇಂದ್ರ ಅವರ ಯೂಟ್ಯೂಬ್ ಚ್ಯಾನಲ್ ಗೆ ಭೇಟಿ ನೀಡಿ