ಉಡುಪಿ: ದೇಶದಲ್ಲಿ ಶತಕೋಟಿ ಲಸಿಕೆ ನೀಡಿದ ಸಾಧನೆ ಪ್ರಯುಕ್ತ ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಡಿಹೆಚ್‌ಓ ಕಚೇರಿ ಆವರಣದಲ್ಲಿ ಆಗಸಕ್ಕೆ 100 ಬಲೂನುಗಳನ್ನು ಹಾರಿ ಬಿಡುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಕಾಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಡಾ.ನವೀನ್ ಭಟ್, ದೇಶದಲ್ಲಿ ಮೊದಲ ಕೋವಿಡ್ ಲಸಿಕೆ ನೀಡಲು ಆರಂಭವಾದಾಗಿನಿಂದ, ಇಂದಿಗೆ 100 ಕೋಟಿ ಲಸಿಕೆ ನೀಡಲಾಗಿದೆ. ಇದಕ್ಕೆ ಕಾರಣವಾದ ಆರೋಗ್ಯ ಇಲಾಖೆ ಮತ್ತು ಎಲ್ಲಾ ಇಲಖೆಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ 14 ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗಿದ್ದು, 9.15 ಲಕ್ಷ ಮಂದಿ ಮೊದಲ ಡೋಸ್ ಮತ್ತು 4.90 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಎರಡೂ ಡೋಸ್ ಲಸಿಕೆ ಪಡೆಯುವದರಿಂದ ಮಾತ್ರ ಕೋವಿಡ್ ನಿಂದ ಸಂಪೂರ್ಣ ರಕ್ಷಣೆ ಪಡೆಯಬಹುದಾಗಿದೆ. ಆದ್ದರಿಂದ ಮೊದಲ ಡೋಸ್ ಪಡೆದ ಎಲ್ಲರೂ 2 ನೇ ಡೋಸ್ ಪಡೆಯು ಮೂಲಕ ಕೋವಿಡ್ 3 ನೇ ಅಲೆಯಿಂದ ರಕ್ಷಿಸಿಕೊಳ್ಳುವಂತೆ ಹಾಗೂ ಜಿಲ್ಲೆಯಲ್ಲಿ ಕೋವಿಡ್ ಮುಕ್ತ ಮಾಡಲು ಸಹಕರಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಕೋವಿಡ್ ಲಸಿಕಾ ಆಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಡಾ. ಪ್ರೇಮಾನಂದ, ಡಾ. ಶ್ರೀರಾಮರಾವ್, ಡಾ. ಚಿದಾನಂದ ಸಂಜು ಮತ್ತಿತರರು ಉಪಸ್ಥಿತರಿದ್ದರು.