ಉಡುಪಿ: ಉಡುಪಿ ನಗರ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ರಾಷ್ಟೀಯ ಹೆದ್ದಾರಿ 66 ರ ಸಂತೆಕಟ್ಟೆ ಮತ್ತು ಅಂಬಲಪಾಡಿ ವಾಹನ ಮೇಲ್ಸೇತುವೆ ನಿರ್ಮಾಣಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ಉಡುಪಿ ನಗರದ ಪ್ರಮುಖ ಕೂಡು ರಸ್ತೆಯಲ್ಲಿನ ವಾಹನ ದಟ್ಟಣೆಯಿಂದ ಜನಸಾಮಾನ್ಯರು ಎದುರಿಸುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂಬಲಪಾಡಿ ವಾಹನ ಮೇಲ್ಸೇತುವೆ ನಿರ್ಮಾಣಕ್ಕೆ 24.56 ಕೋಟಿ, ಸಂತೆಕಟ್ಟೆ ವಾಹನ ಮೇಲ್ಸೇತುವೆಗೆ 24.47 ಕೋಟಿ ಅನುದಾನ ಒದಗಿಸಿ ರಸ್ತೆ ಸುರಕ್ಷತೆ ಬಗ್ಗೆ ಸರ್ಕಾರದ ಆದ್ಯತೆಯನ್ನು ನಿರೂಪಿಸಿದೆ.
ಈ ಅನುದಾನ ಮಂಜೂರಾತಿಗೆ ಸಹಕರಿಸಿದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ, ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರೂ, ಸಂಸದರಾದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ ರಘುಪತಿ ಭಟ್ ರವರಿಗೆ ಉಡುಪಿ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಯಶ್ಪಾಲ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.