ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆ, ಬಸ್ ಸ್ಟ್ಯಾಂಡ್, ನದಿಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವ ಜಾಗ ಗುರುತಿಸುವ (Garbage Black Spot Identification) ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಜಿಲ್ಲೆಯಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಲಾಕ್ ಸ್ಪಾಟ್ ನಿರ್ಮೂಲನೆ ಮಾಡಲಾಗಿದೆ.
ಈವರೆಗೆ ಒಟ್ಟು 55 ಕಡೆಗಳಲ್ಲಿ ಬ್ಲಾಕ್ ಸ್ಪಾಟ್ ಇರುವ ಬಗ್ಗೆ ವಾಟ್ಸಾಪ್ 9483330564 ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಇದರಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಸೇರಿದ 42 ಬ್ಲಾಕ್ ಸ್ಪಾಟ್ ಗಳಿದ್ದು – ಅವುಗಳಲ್ಲಿ 40 ಅನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಉಳಿದಂತೆ ನಗರ ವ್ಯಾಪ್ತಿಗೆ ಸೇರಿದ ಗಾರ್ಬೇಜ್ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಗರಸಭೆಗೆ ಮಾಹಿತಿ ನೀಡಲಾಗಿದೆ.
ಇದರೊಂದಿಗೆ ಸುಮಾರು 100 ಕ್ಕೂ ಹೆಚ್ಚು ಕಡೆಗಳಲ್ಲಿ ತ್ಯಾಜ್ಯ ಎಸೆಯುವ ಬ್ಲಾಕ್ ಸ್ಪಾಟ್ ಗಳನ್ನು ಗ್ರಾಮ ಪಂಚಾಯತ್ ಗಳು ಸ್ವತಃ ಗುರುತಿಸಿದ್ದು, ಅದನ್ನು ಸ್ವಚ್ಛಗೊಳಿಸಿಲಾಗಿದ್ದು ಬಹುತೇಕ ಕಡೆಗಳಲ್ಲಿ ಗಿಡ ನೆಡುವುದು, ಸಿಸಿಟಿವಿ ಅಳವಡಿಕೆ, ಬ್ಯಾನರ್, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಕೋಟೇಶ್ವರ, ಕೋಡಿಬೆಟ್ಟು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಎಸೆಯುವ ಬ್ಲಾಕ್ ಸ್ಪಾಟ್ ಗಳನ್ನು ನಿರ್ಮೂಲನಗೊಳಿಸುವ ಜೊತೆಗೆ ಕೆಲವಡೆ ಅದನ್ನು ಹೂದೋಟವಾಗಿ ಪರಿವರ್ತಿಸಿ ಅದಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ.
ತ್ಯಾಜ್ಯ ಎಸೆಯುವ ಜಾಗವನ್ನು ಗುರುತಿಸಿ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಕೆಲವು ಕಡೆಗಳಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವುದರೊಂದಿಗೆ ಅವರಿಂದಲೇ ಸ್ವಚ್ಛತಾಕಾರ್ಯ ನಡೆಸುವ ಕಾರ್ಯವೂ ಭರದಿಂದ ನಡೆಯುತ್ತಿದೆ.
ಸಿದ್ಧಾಪುರ ಗ್ರಾಮ ಪಂಚಾಯತ್ ನಲ್ಲಿ ಸ್ಮಶಾನದ ಬಳಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ 1000 ರೂ ದಂಡ ವಿಧಿಸಲಾಗಿದೆ. ಸಾಣೂರು ಗ್ರಾಮ ಪಂಚಾಯತ್ ನಲ್ಲಿ ರೂ. 2000, ಬಡಾ ಗ್ರಾಮ ಪಂಚಾಯತ್ ನಲ್ಲಿ ರೂ 2000 ದಂಡ ವಿಧಿಸಲಾಗಿದೆ. ಕೋಡಿಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ಹೆಕ್ಕಿಸುವ ಕಾರ್ಯವೂ ನಡೆದಿದೆ. ಅಲೆವೂರು ಗ್ರಾಮ ಪಂಚಾಯತ್ ನಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಅವರಿಂದಲೇ ಕಸ ಹೆಕ್ಕಿಸಿ ರೂ 2000 ದಂಡ ಕೂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಪೋಟೋ/ ಕಸ ತಂದು ಸುರಿಯುವ ವಾಹನಗಳ ಪೋಟೋ/ ಕಸ ಬಿದ್ದಿರುವ ಜಾಗದ ಪೋಟೋಗಳನ್ನು ಮತ್ತು ಸ್ಥಳದ ಮಾಹಿತಿಯನ್ನು ವಾಟ್ಸಾಪ್ ನಂಬರ್ 9483330564 ಗೆ ಮಾಹಿತಿ ನೀಡಿದ್ದಲ್ಲಿ ಮಾಹಿತಿ ನೀಡಿದವರಿಗೆ ಗ್ರಾಮ ಪಂಚಾಯತ್ ನಿಂದ ಸೂಕ್ತ ಬಹುಮಾನ ನೀಡಲಾಗುವುದು. ಹಾಗೂ ಈ ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಬಹಿರಂಗ ಪಡಿಸುವುದಿಲ್ಲ.
ಜಿಲ್ಲೆಯಲ್ಲಿ ಗಾರ್ಬೇಜ್ ಬ್ಲಾಕ್ ಸ್ಪಾಟ್ ನಿರ್ಮೂಲನಾ ಕಾರ್ಯ ನಿರಂತರ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಬ್ಲಾಕ್ ಸ್ಪಾಟ್‌ಗಳ ಬಗ್ಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡಿ “ನಮ್ಮ ಊರು ಸ್ವಚ್ಛ ಊರು“ ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಿ, ಇಡೀ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಮಾಡಲು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಕರೆ ನೀಡಿದ್ದಾರೆ.