ಕಾರ್ಕಳ: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಚೈತನ್ಯ ಮಿತ್ರ ಮಂಡಳಿ (ರಿ) ಕಲ್ಯಾ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಳಿ ಹಾಳೆಕಟ್ಟೆ ಕಲ್ಯಾ, ಕಾರ್ಕಳ ಇವರ ಸಹಯೋಗದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಯ ಪ್ರಯುಕ್ತ ಜಾನಪದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ನಡೆಯಿತು.
ಬಿಲ್ಲವ ಸಂಘ ಕಾರ್ಕಳ ಅಧ್ಯಕ್ಷರಾದ ಡಿ ಆರ್ ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವಕ ಸಂಘಗಳು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಾತಾ. ಬಿ. ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನಪದ ಕಲೆ ಭಾರತದ ಮೂಲ ಸಂಸ್ಕೃತಿಯಾಗಿದೆ. ಕಲೆ ಹಾಗೂ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಪ್ರತಿ ಸಂಘ-ಸಂಸ್ಥೆಗಳು ನಿರಂತರವಾಗಿ ನಡೆಸಬೇಕಾಗಿದೆ. ಜಾನಪದ ಕಲೆಯಲ್ಲಿ ಜನರ ಜೀವನ ಕಲೆ ಅಡಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರೇಮಾ ಪೂಜಾರ್ತಿ, ಜಗದೀಶ್ ಆಚಾರ್ಯ, ಮುಂಬಯಿ ಉದ್ಯಮಿ ಸಂತೋಷ ಶೆಟ್ಟಿ, ಚೈತನ್ಯ ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಅಶೋಕ್ ಪೂಜಾರಿ, ಬಂಟರ ಸಂಘ ಕಲ್ಯಾದ ಪ್ರಕಾಶ್ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಶೇಖರ ಆಚಾರ್ಯ, ಜಾನಪದ ಅಕಾಡೆಮಿ ಸಿಬ್ಬಂದಿ ಪ್ರಕಾಶ್, ಚೈತನ್ಯ ಮಿತ್ರ ಮಂಡಳಿ ಅಧ್ಯಕ್ಷರಾದ ಅನುಕುಮಾರ್, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಅಧ್ಯಕ್ಷರಾದ ಶಕುಂತಲಾ ಬಂಗೇರ ಉಪಸ್ಥಿತರಿದ್ದರು.
ಸಂಶೋಧಕ ಎಸ್. ಆರ್. ಅರುಣ್ ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಖ್ಯಾತ ಜಾನಪದ ಕಲಾವಿದ ಗುರುಚರಣ್ ಪೊಲಿಪು ಅವರಿಗೆ ತುಳುನಾಡ ಜಾನಪದ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾತಾ. ಬಿ. ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಗೀಲು ಕುಣಿತ, ಲಂಬಾಣಿ ನೃತ್ಯ, ನೀಲಗಾರ ಪದ, ಕರಗ ಕೋಲಾಟ, ಜಾನಪದ ನೃತ್ಯ, ಮತ್ತು ಮಹಿಷಾಸುರ ಮರ್ದಿನಿ ಯಕ್ಷಗಾನ ನೋಡುಗರ ಕಣ್ಮನ ಸೆಳೆಯಿತು.
ಯತೀಶ್ ಎನ್ ಸ್ವಾಗತಿಸಿ, ಪ್ರಕಾಶ್ ಸಾಲ್ಯಾನ್ ಕೆಮ್ಮಣ್ಣು ವಂದಿಸಿದರು. ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.