ಮಣಿಪಾಲ: ಅಕ್ಟೋಬರ್ ತಿಂಗಳನ್ನು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ನೋವು ರಹಿತ ಸ್ತನ ಸ್ಕ್ಯಾನ್ (ಐ ಬ್ರೆಸ್ಟ್ ಸ್ಕ್ಯಾನ್) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು, ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ನಮ್ಮ ರೋಗಿಗಳು, ಸಿಬ್ಬಂದಿ ಮತ್ತು ಸಮುದಾಯದಲ್ಲಿ ಸ್ತನ ಕ್ಯಾನ್ಸರ್ ನ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಕುರಿತು ಜಾಗೃತಿ ಮೂಡಿಸುವುದು.
ಯಾವುದೇ ಕ್ಯಾನ್ಸರ್ ಆದರೂ ಕೂಡ ಆರಂಭದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣವಾಗುವ ಸಾಧ್ಯತೆ ಹೆಚ್ಚು ಅಥವಾ ಸಂಪೂರ್ಣವಾಗಿ ಗುಣಪಡಿಸಬಹುದು. ಈ ಜಾಗೃತಿ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇಂದಿನಿಂದ ಆರಂಭವಾಗಿ ನವೆಂಬರ್ 15ರ ತನಕ ಉಚಿತವಾಗಿ ನೋವುರಹಿತ ಸ್ತನ ಸ್ಕ್ಯಾನ್ (ಐ ಬ್ರೆಸ್ಟ್ ಸ್ಕ್ಯಾನ್) ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾದ ಡಾ. ನವೀನ್ ಎಸ್ ಸಲಿನ್ಸ್, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಸುಮಾ ನಾಯರ್, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪಾದ್ ಹೆಬ್ಬಾರ್, ವೈದ್ಯಕೀಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ಕಾರ್ತಿಕ್ ಉಡುಪ ಉಪಸ್ಥಿತರಿದ್ದರು.
ಡಾ. ಕಾರ್ತಿಕ್ ಉಡುಪ ಅವರು ಸ್ತನ ಕ್ಯಾನ್ಸರ್ ನ ಕುರಿತು ಮಾಹಿತಿ ನೀಡಿದರು ಮತ್ತು ಡಾ. ಸುಮಾ ನಾಯರ್ ಅವರು ಐ ಬ್ರೆಸ್ಟ್ ಸ್ಕ್ಯಾನ್ ಪರೀಕ್ಷಾ ವಿಧಾನದ ಕುರಿತು ಮಾತನಾಡಿದರು. ಸುಚೇತಾ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು.
ಸ್ತನ ಕ್ಯಾನ್ಸರ್ ನ ಆರಂಭಿಕ ಪತ್ತೆಗಾಗಿ ನೋವುರಹಿತ ಸ್ತನ ಸ್ಕ್ಯಾನ್ ಅನ್ನು ಇಂದಿನಿಂದ ಆರಂಭವಾಗಿ ನವೆಂಬರ್ 15ರ ತನಕ ಉಚಿತವಾಗಿ ಮಾಡಲಾಗುತ್ತದೆ. ಪೂರ್ವ ನಿಗದಿಯೊಂದಿಗೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಪೂರ್ವ ನಿಗದಿಗಾಗಿ ದೂ. ಸಂಖ್ಯೆ: 0820 2923748 ಕರೆ ಮಾಡಬಹುದು.