ಬ್ರಹ್ಮಾವರ: ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ನೆಹರು ಯುವಕೇಂದ್ರ ಉಡುಪಿ ಹಾಗೂ ಸಮೃದ್ದಿ ಮಹಿಳಾ ಮಂಡಳಿ (ರಿ.) ಪೇತ್ರಿ ಚೇರ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ’ಮಹಿಳಾ ಕಿಸಾನ್ ದಿವಸ್’ ಅಂಗವಾಗಿ ಪೇತ್ರಿಯ ಅನ್ನಪೂರ್ಣ ನರ್ಸರಿಯಲ್ಲಿ ಕಾರ್ಯಕ್ರಮ ನಡೆಯಿತು.
ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರಾದ ರೂಪ. ಜೆ. ಮಾಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರೈತ ಮಹಿಳೆಯರು ಸ್ವಾವಲಂಬಿಗಳಾಗುವುದು ಮಾತ್ರವಲ್ಲದೆ ಸಂಘಟಿತರಾಗುವುದು ಬಹುಮುಖ್ಯ ಎಂದರು.
ಮುಖ್ಯ ಅತಿಥಿಗಳಾದ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಧನಂಜಯ್ ರವರು ತರಕಾರಿ ಬೀಜಗಳ ಕಿಟ್ ವಿತರಿಸಿ ಯಾವುದೇ ಸಮಸ್ಯೆಗಳಿಗೆ ಅಥವಾ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೃಷಿ ವಿಜ್ಞಾನ ಕೇಂದ್ರ ರೈತರೊಂದಿಗೆ ಸಂಪರ್ಕದಲ್ಲಿರುತ್ತದೆ ಎಂದರು.
ಸಮೃದ್ದಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಮೃದ್ಧಿಯು ಯಾವಾಗಲೂ ಸಂಘಟನೆ ಹಾಗೂ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಹಾಗೂ ಕೃಷಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡ ಸದಸ್ಯರು ಬಹಳ ಮಂದಿ ಇದ್ದಾರೆ. ಸಮೃದ್ಧಿಯು ಎಲ್ಲದರಲ್ಲೂ ಸಮೃದ್ಧವೇ ಎಂದರು.
ತರಕಾರಿ ಕೃಷಿಕರಾಗಿರುವ ಅಕ್ಕಯ್ಯ, ಮಲ್ಲಿಗೆ ಕೃಷಿಯನ್ನು ನಡೆಸುತ್ತಿರುವ ರಮ್ಯ ಆರ್ ನಾಯಕ್, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಸವಿತಾರವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೈತ ಮಹಿಳೆಯರಿಗೆ ಅನ್ನಪೂರ್ಣ ನರ್ಸರಿಯ ಮಾಲಕರಾದ ಶ್ಯಾಮಪ್ರಸಾದ್ ಭಟ್ ರವರು ಅಂಗಾಶ ಕಸಿಯ ಬಾಳೆಯ ಗಿಡಗಳನ್ನು ಉಚಿತವಾಗಿ ವಿತರಿಸಿದರು. ಸಹನಾ ಕೆ. ಹೆಬ್ಬಾರ್, ಇಂದಿರಾ ರವಿ, ಸುಲೋಚನಾ ಉಪಸ್ಥಿತರಿದ್ದರು.
ಆಶಾ ಪಾಟೀಲ್ ಪ್ರಾರ್ಥಿಸಿ, ವನಿತಾ ಪಿ ಶೆಟ್ಟಿ ಸ್ವಾಗತಿಸಿ, ಆಶಾಲತಾ ಧನ್ಯವಾದಗೈದರು. ಮಲ್ಲಿಕಾ ಹರೀಶ್ ನಿರೂಪಿಸಿದರು.