ಉಡುಪಿ: ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಯಾಗಶಾಲೆಗೆ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇಂದು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೂ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಇರುವ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಂಡು ಜೀರ್ಣೋದ್ದಾರ ಸಂಪೂರ್ಣಗೊಂಡು ಎಲ್ಲಾ ಕೆಲಸಗಳು ಶೀಘ್ರವಾಗಿ ವೈಭವಯುತವಾಗಿ ನಡೆಯಲಿ ಎಂದು ಹರಸಿದರು.
ಉಡುಪಿ ಶಾಸಕ ಮತ್ತು ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನಕ್ಕೆ ಆಗಮಿಸುವ ದಾರಿ ಮತ್ತು ಪಾರ್ಕಿಂಗ್ ಸುವ್ಯವಸ್ಥಿತಗೊಳಿಸಲು ಸೂಕ್ತ ಮಾಸ್ಟರ್ ಪ್ಲಾನ್ ರಚಿಸುವಂತೆ ಸಲಹೆ ಸೂಚನೆ ನೀಡಿದರು. ಆ ಮೂಲಕ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮತ್ತಷ್ಟು ಸುವ್ಯವಸ್ಥೆಗೊಳಿಸುವಂತೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ ಸದಾಶಿವ ಪ್ರಭು ಶುಭ ಹಾರೈಸಿದರು. ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಡಾ. ರವಿರಾಜ ವಿ. ಆಚಾರ್ಯ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ನಾಗೇಶ ಹೆಗ್ಡೆ ಸ್ವಾಗತಿಸಿ, ಕೆ.ಸತೀಶ್ ಕುಲಾಲ್ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಹಲವಾರು ಭಕ್ತಾಭಿಮಾನಿಗಳು ಜೀರ್ಣೋದ್ದಾರಕ್ಕೆ ಕಾಣಿಕೆ ನೀಡಿದರು.