ಕೊಡವೂರು: ಸಾಧಿಸುವ ಮನಸ್ಸಿದ್ದರೆ ಸಾಧನೆಯ ಹಾದಿ ತನ್ನ ತಾನೇ ಗೋಚರವಾಗುತ್ತದೆ. ಅಂಚೆ ಚೀಟಿಯಂತಹ ವಿಷಯಗಳಿಂದಲೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಇಂದು ನಾವು ನೋಡುತ್ತಿರುವ ಅಂಚೆ ಚೀಟಿಗಳಿಗೆ ತ್ರಿಭಾಷಾ ತೋರಣ ಕೃತಿಯೇ ಸಾಕ್ಷಿ ಎಂದು ಉಡುಪಿ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯಪಟ್ಟರು.
ಉಡುಪಿ ಅಂಚೆ ವಿಭಾಗ, ಉಡುಪ ರತ್ನ ಪ್ರತಿಷ್ಠಾನ, ಕೊಡವೂರು ಬ್ರಾಹ್ಮಣ ಮಹಾ ಸಭಾ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಸಹಯೋಗದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಪ್ರಯುಕ್ತ ಫಿಲಾಟಲಿ ದಿನದ ಅಂಗವಾಗಿ ಕೊಡವೂರಿನ ಭಾಮಾ ಗ್ಯಾಲರಿಯಲ್ಲಿ ಉಡುಪಿ ಅಂಚೆ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರು ಸಂಪಾದಿತ ತಮ್ಮ ಸಂಗ್ರಹದ ಅಂಚೆ ಚೀಟಿಗಳಿಗೆ ಕನ್ನಡ, ತುಳು ಹಾಗು ಆಂಗ್ಲ ಅಕ್ಷರ ಮಾಲೆಯನ್ನೊಳಗೊಂಡ ತುಳು ಲಿಪಿಯೂ ಕೂಡಿದ “ಅಂಚೆ ಚೀಟಿಗಳಿಗೆ ತ್ರಿಭಾಷಾ ತೋರಣ” ಕೃತಿಯನ್ನು ಬಿಡುಗಡೆಗೊಳಿಸಿದ ಅವರು, ಅಗಾಧತೆಯ ಆಗರವಾಗಿರುವ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ತ್ರಿಭಾಷೆಗಳಿಗೆ ಅಳವಡಿಸಿ ಅದಕ್ಕೆ ತುಳುಲಿಪಿಯನ್ನು ಪೋಣಿಸಿದ ಕೆಲಸ ಶ್ಲಾಘನೀಯ. ಇಂತಹ ಹವ್ಯಾಸವನ್ನು ಯುವ ಜನತೆ ಬೆಳೆಯಿಸಿಕೊಳ್ಳಿ ಎಂದು ಕರೆ ನೀಡಿದರು.
ಭಾಮಾ ಗ್ಯಾಲರಿಯಲ್ಕಿ ನಡೆದ ತ್ರಿಭಾಷಾ ಅಂಚೆ ಚೀಟಿ ಹಾಗೂ ಇತರ ಅಂಚೆ ಚೀಟಿ ಪ್ರದರ್ಶನವನ್ನು ಹಿರಿಯ ಫಿಲಾಟಲಿಸ್ಟ್ ಎಮ್ ಕೃಷ್ಣಯ್ಯರವರು ಉದ್ಘಾಟಿಸಿ, ಇಂತಹ ಅಪರೂಪದ ಗ್ಯಾಲರಿಗಳು, ಗ್ಯಾಲರಿಯಲ್ಲಿ ಕ್ರಮ ಬದ್ಧವಾಗಿ, ಸುಸಜ್ಜಿತವಾಗಿ ಜೋಡಿಸಿದ ಅಂಚೆ ಚೀಟಿಗಳ ವೀಕ್ಷಣೆಯಿಂದ ಹತ್ತು ಹಲವು ಸಾಂಸ್ಕ್ರತಿಕ ಸಾಹಿತ್ಯಿಕ ವಿಶೇಷತೆಗಳ ಅರಿವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಖ್ಯಾತ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಾಹಕ ಬೈಕಾಡಿ ಶ್ರೀನಿವಾಸ ರಾವ್ ರವರನ್ನು ಫಿಲಾಟಲಿ ದಿನದ ಅಂಗವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್ ವಹಿಸಿದ್ದರು. ಅತಿಥಿಗಳಾಗಿ ಕೊಡವೂರು ಬ್ರಾಹ್ಮಣ ಮಹಾಸಭಾ ರಜತ ಮಹೋತ್ಸವದ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಸಹಾಯಕ ಅಂಚೆ ಅಧೀಕ್ಷಕ ನವೀನ್ ವಿ ಎಲ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಅಧ್ಯಕ್ಷ ಪ್ರಕಾಶ್ ಕೊಡಂಕೂರು ಉಪಸ್ಥಿತರಿದ್ದರು.
ಉಡುಪಿ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜಯರಾಮ್ ಶೆಟ್ಟಿ ಸ್ವಾಗತಿಸಿ, ಕೃತಿಯ ಸಂಪಾದಕಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಪ್ರಸ್ತಾವನೆಗೈದರು. ಉಡುಪ ರತ್ನ ಪ್ರತಿಷ್ಠಾನದ ಸಂಚಾಲಕ ಜನಾರ್ದನ ಕೊಡವೂರು ನಿರೂಪಿಸಿದರು.