ಉಡುಪಿ: ಯುವ ಕಾಂಗ್ರೆಸ್ ಇದರ ನೂತನ ವಕ್ತಾರರನ್ನು ಆಯ್ಕೆ ಮಾಡುವ ಸಲುವಾಗಿ “ಯಂಗ್ ಇಂಡಿಯಾ ಕೆ ಬೋಲ್” (ಯುವ ಭಾರತದ ಧ್ವನಿ) ರಾಷ್ಟ್ರೀಯ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
ಮೊದಲನೆ ಹಂತದಲ್ಲಿ ಎಲ್ಲಾ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದ್ದು 5 ವಿಜೇತರನ್ನು ಜಿಲ್ಲಾ ವಕ್ತಾರರಾಗಿ ನೇಮಕ ಮಾಡಲಾಗುವುದು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದ್ದು ರಾಜ್ಯದ ಪ್ರತಿ ಜಿಲ್ಲೆಯಿಂದ 5 ವಿಜೇತರನ್ನು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕೊಡಲಾಗುವುದು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿಯನ್ನು ರಾಜ್ಯ ವಕ್ತಾರರನ್ನಾಗಿ ನೇಮಿಸಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ಸ್ಪರ್ಧೆ 18ರಿಂದ 35 ವರ್ಷದವರಿಗೆ ಮಾತ್ರ ಸೀಮಿತ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹುಟ್ಟುಹಬ್ಬವಾದ ನ. 14ರಂದು ರಾಷ್ಟ್ರಮಟ್ಟದ ಸ್ಪರ್ಧೆ ನವದೆಹಲಿಯಲ್ಲಿ ಏರ್ಪಡಿಸಲಾಗುವುದು. 5 ವಿಜೇತರನ್ನು ರಾಷ್ಟ್ರೀಯ ವಕ್ತಾರರಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇಮಕ ಮಾಡಲಿದ್ದಾರೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸುರೈಯ್ಯ ಅಂಜುಮ್, ಜಿಲ್ಲಾ ಪ್ರಾಧಾನ ಕಾರ್ಯದರ್ಶಿಗಳಾದ ಶಬರೀಶ್ ಸುವರ್ಣ, ಜೆನೆಟ್, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ಇನ್ನಾ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಗೂಗಲ್ ಲಿಂಕ್ https://forms.gle/JykxwXusa8n7y9Vg7 ಫಾರ್ಮ್ ತುಂಬಿಸಲು ಅವಕಾಶ ಕಲ್ಪಿಸಲಾಗಿದೆ.