ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಪದ್ಯಾಣ ಗಣಪತಿ ಭಟ್ಟರು ಇಂದು ನೇಪಥ್ಯಕ್ಕೆ ಸರಿದಿದ್ದಾರೆ. ಒಟ್ಟು ನಾಲ್ಕು ದಶಕಗಳ ಕಾಲ ತೆಂಕುತಿಟ್ಟಿನ ಯಕ್ಷಗಾನ ವೈಭವಕ್ಕೆ ಸಾಕ್ಷಿ ಆಗಿದ್ದ ಪದ್ಯಾಣ ಗಣಪತಿ ಭಟ್ಟರು 24 ವರ್ಷಗಳ ಕಾಲ ಅತ್ಯಂತ ಪ್ರಸಿದ್ದವಾದ ಸುರತ್ಕಲ್ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆದ ದಿನಗಳು ಸ್ಮರಣೀಯ.
ಒಂದೆಡೆ ಅಗರಿ ಭಾಗವತರ ಶಿಷ್ಯತ್ವ, ಮತ್ತೊಂದೆಡೆ ಮೇರು ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಆಗಿನ ಕಾಲದ ಇನ್ನೊಬ್ಬ ಅರ್ಥಧಾರಿ ತೆಕ್ಕಟ್ಟೆ ಆನಂದ ಮಾಸ್ಟ್ರು ಇಂಥವರ ಸಾಹಚರ್ಯ ಅವರನ್ನು ಮಹಾ ಸಂಗೀತ ತಾರೆಯಾಗಿ ರೂಪಿಸಿದ ವರ್ಷಗಳು ಅವು. ಯಾರನ್ನೂ ಸುಲಭವಾಗಿ ಜೀರ್ಣ ಮಾಡಿಕೊಳ್ಳದ ಶೇಣಿಯವರು ಪದ್ಯಾಣರ ಹಾಡಿನ ಶೈಲಿಗೆ ಮಾರು ಹೋಗಿದ್ದರು. ಮೇಳದ ಯಜಮಾನರಾದ ಕಸ್ತೂರಿ ಪೈ ಅವರಿಗಂತೂ ಪದ್ಯಾಣ ಭಾಗವತರು ಅಚ್ಚುಮೆಚ್ಚು.
ಸದಾರಮೆ, ತಿರುಪತಿ ಕ್ಷೇತ್ರ ಮಹಾತ್ಮೆ. ತುಳುನಾಡ ಬಲಿಯೇಂದ್ರ, ಯಯಾತಿ, ಶಿಲ್ಪಿ ವೀರ ಶಂಭು ಕಲ್ಕುಡ, ಭಗವಾನ್ ವಿಶ್ವಕರ್ಮ ಮೊದಲಾದ ಆಧುನಿಕ ಯಕ್ಷ ಪ್ರಸಂಗಗಳು ಯಶಸ್ವಿಯಾಗಿ ವೇದಿಕೆ ಏರಿದ್ದು ಸುರತ್ಕಲ್ ಮೇಳದಲ್ಲಿ. ಅಲ್ಲೆಲ್ಲ ಪದ್ಯಾಣ ಗಣಪತಿ ಭಟ್ಟರ ಛಾಪು ಇದ್ದೆ ಇತ್ತು. ಶೇಣಿ ಅವರ ಬಪ್ಪ ಬ್ಯಾರಿಯ ಪಾತ್ರವು ಹೊಸ ಎತ್ತರವನ್ನು ಪಡೆದದ್ದು ಪದ್ಯಾಣ ಗಣಪತಿ ಭಟ್ಟರ ಭಾಗವತಿಕೆಯಲ್ಲಿ.
ಕನ್ನಡ, ತುಳು ಎರಡೂ ಭಾಷೆಯಲ್ಲಿ ಸಾಹಿತ್ಯ ಶುದ್ಧಿ, ಮೂರು ಸ್ಥಾಯಿಯಲ್ಲಿ ಸರಳವಾಗಿ ಸಂಚರಿಸುವ ಸ್ವರ, ಹೊಸ ರಾಗಗಳ ಆವಿಷ್ಕಾರ, ಸಂಪ್ರದಾಯ ಮೀರದ ಬದ್ಧತೆ, ಎಂಥ ಸ್ಟಾರ್ ಕಲಾವಿದರನ್ನು ಕೂಡ ರಂಗದಲ್ಲಿ ನಿಯಂತ್ರಿಸುವ ರಂಗಪ್ರಜ್ಞೆ, ಚೌಕಿಯಲ್ಲಿ ಸೌಹಾರ್ದತೆ ಕಾಪಾಡುವ ಹೊಣೆಗಾರಿಕೆ, ಪಾತ್ರಗಳ ಹಂಚಿಕೆಯಲ್ಲಿ ಜಾಣ್ಮೆ, ತನ್ನ ನೂರಾರು ಜನ ಶಿಷ್ಯರನ್ನು ತನ್ನ ಎತ್ತರಕ್ಕೆ ಬೆಳೆಸುವ ಔದಾರ್ಯತೆ ಇವೆಲ್ಲವೂ ಅವರನ್ನು ಮಹಾಮಾನ್ಯ ಭಾಗವತರಾಗಿ ಮಾಡುತ್ತವೆ.
ತೆಂಕಿನಲ್ಲಿ ಪದ್ಯಾಣ ಶೈಲಿಯನ್ನು ಜನಪ್ರಿಯಗೊಳಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಭಾಗವತರು ಹಾಡಲು ವೇದಿಕೆಯನ್ನು ಏರುವಾಗ ಅದೇ ಗಾಂಭೀರ್ಯ, ಅದೇ ಕೆಂಪು ಮುಂಡಾಸು, ಭ್ರೂ ನಡುವೆ ದೊಡ್ಡ ಕುಂಕುಮದ ಬೊಟ್ಟು, ಅದೇ ಶಿಸ್ತು, ಅದೇ ಸಂಪ್ರದಾಯ, ಅದೇ ಮಾಧುರ್ಯ, ಅದೇ ಚೌಕಟ್ಟು! ಇವುಗಳನ್ನು ಪದ್ಯಾಣ ಭಾಗವತರು ಎಂದಿಗೂ ಮೀರಿದವರು ಅಲ್ಲ.
ಪದ್ಯಾಣ ಭಾಗವತರು ಹಾಡಲು ಕುಳಿತರೆ ಪ್ರಸಂಗದ ಕತೆ ಹೆಜ್ಜೆಯನ್ನು ತಪ್ಪುವುದಿಲ್ಲ ಎನ್ನುತ್ತಿದ್ದರು ಸುರತ್ಕಲ್ ಮೇಳದ ಯಜಮಾನರಾದ ಕಸ್ತೂರಿ ಪೈಗಳು.
ಈ ಟಿವಿ ಮಾಧ್ಯಮದಲ್ಲಿ ಜನಪ್ರಿಯ ಆದ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಮೊದಲ ಯಕ್ಷಗಾನದ ಭಾಗವತ ಅವರು. ಅವರ ಹಾಡುಗಳನ್ನು ಹಲವು ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ಬಳಕೆ ಮಾಡಲಾಗಿದೆ.
ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದಾಗ ತಪ್ಪು ಮಾಡಿ ಮುಖ್ಯೋಪಾಧ್ಯಾಯರ ಕೈಗೆ ಸಿಕ್ಕಿ ಬಿದ್ದ ಹುಡುಗ ಅವರು! ಅಪ್ಪನನ್ನು ಕರೆದುಕೊಂಡು ಬಾ ಎಂದು ಮೇಷ್ಟ್ರು ಮನೆಗೆ ಕಳುಹಿಸಿದಾಗ ಮತ್ತೆ ಶಾಲೆಯ ಕಡೆಗೆ ತಲೆ ಹಾಕಿ ಮಲಗಲಿಲ್ಲ. ಆದರೆ ಮುಂದೆ ಸುರತ್ಕಲ್ ಮೇಳದಲ್ಲಿ ಭಾರೀ ಸಾಧನೆಯನ್ನು ಮಾಡಿದಾಗ ಅದೇ ಅಧ್ಯಾಪಕರು ಬಂದು ತಮ್ಮ ಶಿಷ್ಯನನ್ನು ಆಲಂಗಿಸಿ, ಹರಸಿ ವೇದಿಕೆಯಲ್ಲಿ ಸನ್ಮಾನ ಮಾಡಿದ್ದರು. ಅದು ನನ್ನ ಜೀವನದ ಸ್ಮರಣೀಯ ಕ್ಷಣ ಎಂದು ಅವರು ಒಂದೆಡೆ ಹೇಳಿದ್ದಾರೆ.
ಏನಿದ್ದರೂ ತೆಂಕುತಿಟ್ಟಿನ ಯಕ್ಷಗಾನದ ಕ್ಷೇತ್ರಕ್ಕೆ ಒಂದು ಘನತೆ, ಗೌರವವನ್ನು ತಂದುಕೊಟ್ಟ ಪದ್ಯಾಣ ಗಣಪತಿ ಭಟ್ಟರು ಇನ್ನಷ್ಟು ವರ್ಷ ಹಾಡುವ ತ್ರಾಣ, ಆರೋಗ್ಯ, ಶಕ್ತಿ ಮತ್ತು ಪ್ರತಿಭೆಯನ್ನು ಹೊಂದಿದ್ದರು. ಭಾಗವತರಿಗೆ ಏನು ಅವಸರ ಇತ್ತೋ ಯಾರಿಗೆ ಗೊತ್ತು? ಇಷ್ಟು ಬೇಗ ಮಂಗಲ ಪದ ಹಾಡಿ ತಾಳ ಕೆಳಗೆ ಇಟ್ಟು ಎದ್ದು ಹೋಗುವುದಾ?
ರಾಜೇಂದ್ರ ಭಟ್ ಕೆ
ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು