ಹಿರಿಯಡ್ಕ: ಅಹಿಂಸಾ ತತ್ವದ ಜೊತೆಗೆ ಸ್ವಚ್ಛತೆ, ಸ್ವಾವಲಂಬನೆ, ಸ್ವದೇಶಿ ಚಿಂತನೆಯ ಮೂಲ ಮಂತ್ರವನ್ನು ನಾಡಿಗೆ ನೀಡಿರುವ ಮಹಾತ್ಮಾ ಗಾಂಧೀಜಿ ಹಾಗೂ ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ಮೊಳಗಿಸಿ ದೇಶದ ಯೋಧರು ಮತ್ತು ರೈತರಿಗೆ ಸ್ಫೂರ್ತಿ ತುಂಬಿರುವ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸ್ವಚ್ಛ ಭಾರತ, ಆತ್ಮನಿರ್ಭರ ಭಾರತ, ಅಯುಷ್ಮಾನ್ ಭಾರತ್ ನಂತಹ ನೂರಾರು ಉದಾತ್ತ ಜನಪರ ಯೋಜನೆಗಳನ್ನು ದೇಶವಾಸಿಗಳಿಗೆ ನೀಡಿರುವ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ ಸಶಕ್ತ ಭಾರತ ಸಾಕಾರಗೊಳಿಸಲು ಶ್ರಮಿಸೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಸೇವೆ ಮತ್ತು ಸಮರ್ಪಣೆ ಅಭಿಯಾನದ ಸಲುವಾಗಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯ ಪ್ರಯುಕ್ತ ಬಿಜೆಪಿ ಉಡುಪಿ ಜಿಲ್ಲೆ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಅಮೋಘ (ರಿ.) ಉಡುಪಿ ಹಿರಿಯಡ್ಕ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕಾರ್ಲ್ ಜೈಸ್ ಇಂಡಿಯಾ (ಬೆಂಗಳೂರು) ಪ್ರೈವೇಟ್ ಲಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ, ಇವರ ಜಂಟಿ ಆಶ್ರಯದಲ್ಲಿ ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ನೇತ್ರದಾನ ನೋಂದಣಿ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಕೆಲವು ಮುಂದುವರಿದ ರಾಷ್ಟ್ರಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರೋನಾ ಮಹಾಮಾರಿಯಂತಹ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿ, ಆರೋಗ್ಯ ಸೇವೆ, ಲಸಿಕಾ ಅಭಿಯಾನ ನಡೆಸುವ ಜೊತೆಗೆ ಎಲ್ಲಾ ರಂಗಗಳಲ್ಲಿ ವಿಕಾಸದ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಪ್ರಧಾನಿ ಮೋದಿ ಆಡಳಿತ ವೈಖರಿ ಮತ್ತು ಸಮರ್ಥ ನಾಯಕತ್ವ ವಿಶ್ವ ಮನ್ನಣೆ ಪಡೆದಿದ್ದರೂ, ಮೋದಿ ಜನಪ್ರಿಯತೆಯನ್ನು ಕುಗ್ಗಿಸಲು ವಿಫಲ ಯತ್ನದಲ್ಲಿ ತೊಡಗಿರುವ ಪೂರ್ವಾಗ್ರಹಪೀಡಿತ ವರ್ಗದ ಬಗ್ಗೆ ಜನತೆ ಜಾಗೃತರಾಗಿ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡಬೇಕಿದೆ.
ಪಕ್ಷದ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಉದಾತ್ತ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪರಿಣಾಮಕಾರಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಸೆ.17ರಂದು ಜಿಲ್ಲೆಯಾದ್ಯಂತ ಚಾಲನೆಗೊಂಡಿರುವ 20 ದಿನಗಳ ಸೇವೆ ಮತ್ತು ಸಮರ್ಪಣ ಅಭಿಯಾನ, ಅವರು ಚುನಾಯಿತ ಸರಕಾರದ ನೇತೃತ್ವವನ್ನು ವಹಿಸಿ 20 ವರ್ಷಗಳು ತುಂಬುವ ದಿನ ಅ.7ರಂದು ಅತ್ಯಮೂಲ್ಯ ಸೇವಾ ಕಾರ್ಯಗಳನ್ನು ಪೂರೈಸಿ ಸಮಾಪನಗೊಳ್ಳಲಿದೆ. ಅಭಿಯಾನದ ಅಂಗವಾಗಿ ಆಯೋಜಿಸಿರುವ ಜಿಲ್ಲೆಯಲ್ಲೇ ಅತೀ ದೊಡ್ಡ ಉಚಿತ ಕಣ್ಣಿನ ತಪಾಸಣೆ ಹಾಗೂ ಇನ್ನಿತರ ಸೌಲಭ್ಯಗಳ ಈ ಶಿಬಿರ ಗ್ರಾಮಾಂತರ ಪ್ರದೇಶದ ಜನತೆಗೆ ವರದಾನವಾಗಿ ಮೂಡಿ ಬರಲಿ ಎಂದು ಹಾರೈಸಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸಾದ್ ನೇತ್ರಾಲಯ ಉಡುಪಿ ಇದರ ವೈದ್ಯಕೀಯ ನಿರ್ದೇಶಕ ನಾಡೋಜ ಡಾ. ಕೃಷ್ಣ ಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ರಾಜ್ಯ ವೈದ್ಯಕೀಯ ಪ್ರಕೋಷ್ಠ ಸಮಿತಿ ಸದಸ್ಯ ಡಾ. ವಿಜಯೇಂದ್ರ ರಾವ್, ಉಡುಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾ. ವಿದ್ಯಾಧರ ಶೆಟ್ಟಿ ಕೆ., ಅಮೋಘ (ರಿ.) ಉಡುಪಿ ಹಿರಿಯಡ್ಕ ಅಧ್ಯಕ್ಷೆ ಪೂರ್ಣಿಮಾ ಸುರೇಶ್ ನಾಯಕ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಸದಾನಂದ ಉಪ್ಪಿನಕುದ್ರು, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ ಮಾಂಬೆಟ್ಟು, ಗೋಪಾಲಕೃಷ್ಣ ರಾವ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಉಪಸ್ಥಿತರಿದ್ದರು.
ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿಜೇತ್ ಬೆಳ್ಳರ್ಪಾಡಿ ವಂದಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 582 ಮಂದಿ ಸಾರ್ವಜನಿಕರ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. ಅವಶ್ಯಕತೆ ಇರುವ ಸಾರ್ವಜನಿಕರಿಗೆ ಅಕ್ಟೋಬರ್ 27ರಂದು ಕನ್ನಡಕ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.