ಉಡುಪಿ: ರಾಷ್ಟ್ರ ಮಟ್ಟದಲ್ಲಿ ಅಕ್ಟೋಬರ್ 1 ರಿಂದ ಅಕ್ಟೋಬರ್ 31ರ ಒಂದು ತಿಂಗಳುಗಳ ಕಾಲ ನಡೆಯುವ ಕ್ಲೀನ್ ಇಂಡಿಯಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಸಂಘಟಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ, ಎನ್ಎಸ್ಎಸ್, ಎನ್.ಸಿ.ಸಿ ಅಧಿಕಾರಿಗಳೊಂದಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಲೀನ್ ಇಂಡಿಯಾ ಕಾರ್ಯಕ್ರಮದ ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಇವರನ್ನು ಹಾಗೂ ಮುಖ್ಯ ಸಮನ್ವಯ ಅಧಿಕಾರಿಯಾಗಿ ನೆಹರೂ ಯುವ ಕೇಂದ್ರದ ಯುವಜನ ಅಧಿಕಾರಿಯಾದಂತಹ ವಿಲ್ಫ್ರೆಡ್ ಡಿಸೋಜಾ ಇವರನ್ನು ನೇಮಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿಯಲ್ಲಿ ಒಂದು ಬಾರಿ ಬಳಸಿ ಬಿಸಾಡಿದಂತಹ ಪ್ಲಾಸ್ಟಿಕ್ಗಳನ್ನು ಹೆಕ್ಕಿ ಆಯಾ ಗ್ರಾಮ ಪಂಚಾಯತ್ಗಳಿಗೆ ಹಸ್ತಾಂತರಿಸುವಲ್ಲಿ ಹಾಗೂ ಈ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಅಕ್ಟೋಬರ್ 1 ರಂದು ಎಂ.ಜಿ.ಎಂ ಕಾಲೇಜಿನಲ್ಲಿ ಈ ಕಾರ್ಯಕ್ರಮದ ಉದ್ಟಾಟನೆಯನ್ನು ಉಡುಪಿ ಜಿಲ್ಲಾಧಿಕಾರಿ ನೆರವೇರಿಸಲಿದ್ದಾರೆ.