ಉಡುಪಿ: ಬಿಟ್ರಿಷ್ ಕಾಲದಿಂದಲೂ ಗ್ರಾಮೀಣ ಪ್ರದೇಶವೂ ಸೇರಿದಂತೆ ಎಲ್ಲಾ ಕಡೆಯಲ್ಲಿರುವ ಗೋಮಾಳದ ಭೂಮಿಯನ್ನು ಜಾನುವಾರುಗಳ ಮೇವು, ಪಾಲನೆಗೆ ಮೀಸಲಿಡಬೇಕು. ಇದಕ್ಕಾಗಿ ಪ್ರತಿ ಗ್ರಾಮಗಳಲ್ಲಿರುವ ಗೋಮಾಳ ಜಾಗವನ್ನು ಜಿಲ್ಲಾಡಳಿತ ಗುರುತಿಸಿ ಕಾದಿರಿಸಬೇಕು ಎಂದು ಪೇಜಾವರ ಮಠಾಧೀಶರೂ, ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರಾಗಿರುವ ಶ್ರೀವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ. ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಮಾತನಾಡಿದ ಅವರು, ಗೋಸಂತತಿಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಉಡುಪಿಯಿಂದಲೇ ಆರಂಭವಾಗಬೇಕೆಂಬ ಆಶಯದೊಂದಿಗೆ ನಾವೀ ಒತ್ತಾಯ ಮಾಡುತಿದ್ದೇವೆ ಎಂದರು.
ಜಿಲ್ಲೆಯ 233 ಗ್ರಾಮಗಳಲ್ಲಿ 3000 ಎಕರೆಯಷ್ಟು ಗೋಮಾಳದ ಭೂಮಿಗಳಿದ್ದು, ಅವುಗಳ ಗಡಿ ಗುರುತು ಮಾಡಬೇಕು. ಗೋಮಾಳಗಳನ್ನು ಕೇವಲ ಗೋವುಗಳಿಗಾಗಿ ಮೀಸಲಿಟ್ಟು, ಅವುಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಗ್ರಾಮಗಳಲ್ಲಿರುವ ಗೋಮಾಳದ ಜಮೀನನ್ನು ಆಯಾ ಗ್ರಾಮದ ಗೋವುಗಳ ಪಾಲನೆ ಗೆ ಮಾತ್ರ ಒದಗಿಸಬೇಕು. ಈ ಬಗ್ಗೆ ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದು ಗೋ ಹಿತರಕ್ಷಣಾ ಒಕ್ಕೂಟದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಂತರ ಗೋ ಹಿತರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷರಾದ ಸ್ವಾಮೀಜಿಯವರ ಮಾರ್ಗದರ್ಶನದಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಉಡುಪಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿರುವ ಗೋಮಾಳದ ಜಾಗದ ಗಡಿ ಗುರುತಿಸಿ ಹದ್ದುಬಸ್ತು ಮಾಡಿಕೊಡುವಂತೆ ಸ್ಥಳೀಯಾಡಳಿತಕ್ಕೆ ಸೂಚಿಸುವಂತೆ ಮನವಿ ನೀಡಲಾಯಿತು.
ಗೋ ಹಿತರಕ್ಷಣಾ ಒಕ್ಕೂಟ ಉಡುಪಿ ಜಿಲ್ಲಾ ಸಂಚಾಲಕ ಗಣೇಶ್ ಕಿಣಿ ಬೆಳ್ವೆ, ಕಾರ್ಯದರ್ಶಿ ವಿಜಯ್ ಪ್ರಕಾಶ್ ಬೈಲಕೆರೆ, ಶ್ರೀನಿವಾಸ್ ಶೆಟ್ಟಿಗಾರ್ ಬಾರ್ಕೂರು, ಡಾ. ಅಣ್ಣಯ್ಯ ಕುಲಾಲ್, ಸೂರ್ಯನಾರಾಯಣ ಗಾಣಿಗ ಮಟಪಾಡಿ, ಕೃಷ್ಣಾನಂದ ಛಾತ್ರ, ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ, ಭಾಸ್ಕರ್ ಶೆಟ್ಟಿ ನಾವುಂದ, ಶ್ರೀಧರ ಆಚಾರ್ಯ ಕುಮ್ರಗೋಡು, ಶಶಾಂಕ್ ಶಿವತ್ತಾಯ, ವಿಶ್ವನಾಥ್ ನಾಯ್ಕ ನಡೂರು ಕಂಡಿಕೆ, ಚಂದ್ರಶೇಖರ ಹೆಗ್ಡೆ ಶಾನಾಡಿ, ಶಂಕರ್ ಹೆಗ್ಡೆ ಜನ್ನಾಡಿ, ಪ್ರೀತಮ ಎಸ್.ರೈ ಬಸ್ರೂರು, ರಾಮ ಮಡಿವಾಳ ಕುಂಬಾಶಿ, ಸುರೇಶ್ ಬೆಟ್ಟಿನ್ ಕೋಟೇಶ್ವರ ಉಪಸ್ಥಿತರಿದ್ದರು.