ನವದೆಹಲಿ: ಗುಲಾಬ್ ಚಂಡಮಾರುತದ ಅಬ್ಬರ ಮುಗಿಯಿತು ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಚಂಡಮಾರುತ ತಯಾರಾಗಿದೆ. ಅರಬ್ಬೀ ಸಮುದ್ರದಲ್ಲಿ ಶಹೀನ್ ಚಂಡಮಾರುತ ನಿರ್ಮಾಣವಾಗಲಿದೆ.
ಗುಜರಾತ್ ಕರಾವಳಿಯಲ್ಲಿ ಸೆಪ್ಟೆಂಬರ್ 30ರಂದು ನಿಮ್ನ ಒತ್ತಡದಿಂದ ವಾಯುಭಾರ ಕುಸಿತವಾಗಲಿದ್ದು ಇದು ಬಲಗೊಂಡ್ಡು ಅಕ್ಟೋಬರ್ 1 ರಂದು ಶಹೀನ್ ಚಂಡಮಾರುತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಆರ್.ಕೆ. ಜೆನಾಮನಿ ಹೇಳಿದ್ದಾರೆ.
ಭಾರತಕ್ಕೆ ನೇರವಾದ ಪರಿಣಾಮ ಇಲ್ಲದಿದ್ದರೂ ಗುಜರಾತ್ ಕರಾವಳಿಯ ಹಲವೆಡೆ ಹಾಗೂ ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅರಬ್ಬೀ ಸಮುದ್ರ ಪ್ರಕ್ಷುಬ್ದ:
ಉತ್ತರ ಮಹಾರಾಷ್ಟ್ರ ಕರಾವಳಿ, ಗುಜರಾತ್ ಕರಾವಳಿ ಮತ್ತು ಇವುಗಳಿಗೆ ಹೊಂದಿಕೊಂಡಿರುವ ಅರಬ್ಬೀ ಸಮುದ್ರದ ಭಾಗಗಳಲ್ಲಿ ಮೀನುಗಾರರು ಅಕ್ಟೋಬರ್ 3ರವರೆಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದ ಹಲವೆಡೆ ಭಾರಿ ಮಳೆಯಾಗುತ್ತಿದೆ.