ಮಂಗಳೂರು: ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಎಂದೇ ಖ್ಯಾತಿ ಪಡೆದಿರುವ ಲಡಾಖ್ ಪ್ರಾಂತ್ಯದ ಸಿಯಾಚಿನ್ ಮಿಲಿಟರಿ ಬೇಸ್ ಪ್ರವಾಸಿಗರ ವೀಕ್ಷಣೆಗೆ ಉದ್ಘಾಟನೆಗೊಂಡಿದ್ದು, ಉದ್ಘಾಟನೆ ಸಂದರ್ಭದಲ್ಲಿ ಮಂಗಳೂರಿನ ಮತ್ತು ಕರ್ನಾಟಕದ ಏಕೈಕ ಪ್ರವಾಸಿಗರ ತಂಡವಾಗಿ “ಯೂಥ್ ಆಫ್ ಜಿ.ಎಸ್.ಬಿ” ತಂಡ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಉದ್ಘಾಟನೆ ನೆರವೇರಿಸಿದ ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ಅವರು ಭಾರತದ ಕೊನೆಯ ಹಳ್ಳಿಯಾಗಿರುವ ವಾರ್ಷಿಯಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇಂದು ಅಭೂತಪೂರ್ವ ನಿರ್ಧಾರ ತೆಗೆದುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ, ಲಡಾಖ್ ಪ್ರದೇಶದ ಆರ್ಥಿಕ ಅಭಿವೃದ್ಧಿ ಜೊತೆಗೆ ಜಗತ್ತಿನ ಅತ್ಯಂತ ದುರ್ಗಮ ಯುದ್ಧ ಪ್ರದೇಶವಾಗಿರುವ ಸಿಯಾಚಿನ್ ಮಿಲಿಟರಿ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಂಡು ಭಾರತೀಯ ಸೈನಿಕರಿಗೆ ಮತ್ತಷ್ಟು ಮನೋಸ್ಥೈರ್ಯ ತುಂಬಿಸುವ ಕಾರ್ಯಮಾಡಿದೆ. ಸ್ವಾತಂತ್ರ್ಯದ ಬಳಿಕ ಹಲವು ಸರಕಾರ ಆಡಳಿತ ನಡೆಸಿದ್ದು ಇಂತಹ ನಿರ್ಧಾರ ಯಾರೂ ತೆಗೆದುಕೊಂಡಿಲ್ಲ.
ಉದ್ಘಾಟನೆ ಸಮಯದಲ್ಲಿ ಆಗಮಿಸಿ ಐತಿಹಾಸಿಕ ಕ್ಷಣಕ್ಕೆ ಭಾಗಿಯಾದ ಮಂಗಳೂರಿನ ತಂಡ ಸಮೇತ ನಾನಾ ಭಾಗಗಳಿಂದ ಆಗಮಿಸಿದ ಪ್ರವಾಸಿಗರಿಗೆ ಧನ್ಯವಾದ ಸಮರ್ಪಿಸಿದರು.
ಯೂಥ್ ಆಫ್ ಜಿ.ಎಸ್.ಬಿ ಮುಖ್ಯಸ್ಥರಾಗಿರುವ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.