ಉಡುಪಿ: ರಾಷ್ಟ್ರೀಯ ಹೆದ್ದಾರಿ 66, ಕರಾವಳಿ ಬೈಪಾಸ್ ಬಳಿ ಕೋಳಿ ತ್ಯಾಜ್ಯ, ಸಿಯಾಳ ಬೊಂಡ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯಲಾಗಿದ್ದು ಪರಿಸರದಲ್ಲಿ ಗಬ್ಬು ವಾಸನೆ ಹರಡಿದೆ. ಪರಿಸರದ ಸೌಂದರ್ಯವು ಹಾಳಾಗಿದೆ. ಬೊಂಡದ ಚಿಪ್ಪುಗಳಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳು ಮೊಟ್ಟೆ ಇಟ್ಟಿರುವುದು ಕಂಡುಬಂದಿದೆ. ಉಡುಪಿ ನಗರವನ್ನು ಪ್ರವೇಶಿಸುವ ಕಡೆಯಲ್ಲಿಯೇ ಈ ರೀತಿ ಪರಿಸ್ಥಿತಿ ಇರುವುದು ಬೇಸರದ ಸಂಗತಿ.
ಮಲೇರಿಯಾ, ಡೆಂಗ್ಯೂ ಕಾಯಿಲೆ ಹರಡುವ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಇಲ್ಲಿಯ ಸ್ಥಳ ಮಾರ್ಪಟ್ಟಿದೆ. ಸಾಮಾಜಿಕ ಪ್ರಜ್ಞೆ ಇಲ್ಲದ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.