ಮನೆ ಕಟ್ಟಿ ನೋಡು ದೇಶ ಸುತ್ತಿ ನೋಡು ಎಂದು ಹೇಳುವರು ತಿಳಿದವರು. ದೇಶ ಸುತ್ತುವುದರಿಂದ ವಿವಿಧ ರೀತಿಯ ಜ್ಞಾನೋದಯವಾಗುವುದಲ್ಲದೆ ವಿವಿಧ ಸಂಸ್ಕೃತಿಯ ಪರಿಚಯ ಹಾಗೂ ತಿಂಡಿ ತಿನಿಸುಗಳ ವಿಚಾರ ಹಾಗೂ ಇತಿಹಾಸದ ಬಗ್ಗೆ ಅರಿವು ಮೂಡುತ್ತದೆ.
ನಾನು ಚಿಕ್ಕಂದಿನಿಂದಲೂ ಭಾರತ ದೇಶದ ವಿವಿಧ ಕಡೆ ತಿರುಗಿದ್ದೇನೆ. ಈಗಲೂ ಕೂಡ ಅದರ ಸ್ವಾದವನ್ನು ಸವಿಯುತ್ತಿದ್ದೇನೆ. ಭಾರತಾದ್ಯಂತ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ತಂದೆ ತಾಯಿಯ ಜೊತೆ ಉತ್ತರ ಭಾರತ, ದಕ್ಷಿಣ ಭಾರತ, ಮಹಾರಾಷ್ಟ್ರ, ಕಡೆಗೆ ನೇಪಾಳವನ್ನೂ ನೋಡಿ ಬಂದಿದ್ದೇನೆ.
ಮದುವೆಯಾದ ನಂತರ ಕೂಡ ಪ್ರವಾಸಿ ಪ್ರಿಯರಾದ ನನ್ನ ಗಂಡ ಹಾಗು ಮಕ್ಕಳ ಜೊತೆ ಪ್ರತಿ ವರ್ಷ ಭಾರತದ ಅನೇಕ ರಾಜ್ಯಗಳಿಗೆ ಭೇಟಿ ನೀಡುತ್ತಾ ಬಂದಿದ್ದೇನೆ. ಮೊದಲಿಗೆ ಕರ್ನಾಟಕದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ನಂತರ ಪ್ರತಿ ವರ್ಷ ಒಂದೊಂದು ರಾಜ್ಯದಲ್ಲಿ ಇರುವ ವಿಶೇಷ ಸ್ಥಳಗಳಿಗೆ ಭೇಟಿ ನೀಡಿದೆವು. ಹಿಂದಿನ ವರ್ಷ ಕೊರೋನಾದ ಹಾವಳಿಯಿಂದ ಎಲ್ಲಿಯೂ ತಿರುಗಲಿಕ್ಕೆ ಆಗಲಿಲ್ಲ. ಆದರೆ ಸ್ಥಳೀಯ ಬೆಟ್ಟ ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡಿದೆವು.
ಕರ್ನಾಟಕದಲ್ಲಿ ಬೇಲೂರು, ಹಳೆಬೀಡು, ಮೈಸೂರು, ಹಂಪಿ, ಚಿತ್ರದುರ್ಗ ಆದಷ್ಟು ಎಲ್ಲ ಕಡೆ ತಿರುಗಿದ್ದೇವೆ. ಮಹಾರಾಷ್ಟ್ರದಲ್ಲಿ ಅಜಂತಾ, ಎಲ್ಲೋರಾ, ಕೊಲ್ಲಾಪುರ, ಕೇರಳದಲ್ಲಿ ತಿರುವನಂತಪುರಂ ಹಾಗೂ ಅನೇಕ ಅರಮನೆಗಳನ್ನು ಮ್ಯೂಸಿಯಂಗಳಿಗೆ ಭೇಟಿ ನೀಡಿದೆವು. ತಮಿಳುನಾಡು ಟೂರಿಗೆ ಹೋದಾಗ ಮಧುರೈ ಮೀನಾಕ್ಷಿ, ಕುಂಭಕೋಣಂ ಮುಂತಾದವುಗಳು, ವಾರಣಾಸಿ, ಡೆಹಲಿ ಹೀಗೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದೆವು. ಇನ್ನೂ ಮುಂದೆಯೂ ಕೂಡ ಉಳಿದ ರಾಜ್ಯಗಳಿಗೆ ಭೇಟಿ ನೀಡುವ ಯೋಜನೆಯಿದೆ.
ನೋಡಿದ ಎಲ್ಲಾ ಸ್ಥಳಗಳು ನನಗೆ ಭಾರತದ ಅದ್ಭುತ ದರ್ಶನ ನೀಡಿತು. ನನಗೆ ಮತ್ತೊಮ್ಮೆ ಎಲ್ಲಾ ಸ್ಥಳಗಳನ್ನು ನೋಡುವ ಆಸೆ. ಆ ಅದ್ಭುತ ಕಲೆಯನ್ನು ಸವಿಯವ ಬಯಕೆ. ಭಾರತವೆಂಬುದು ಸಾಮಾನ್ಯ ದೇಶವಲ್ಲವೆನ್ನುವ ಅನುಭವವಾಗಿದೆ. ನಾನು ಭಾರತದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವೆನಿಸುತ್ತದೆ. ಪ್ರತಿಯೊಂದು ಸ್ಥಳಗಳು ಮಾನವ ನಿರ್ಮಿತವೇ ಅದು ಸಾಧ್ಯವೇ ಎಂದು ಊಹಿಸಲೂ ಅಸಾಧ್ಯವೆನಿಸುವ ಕಲೆಗಳನ್ನು ಸವಿದಿದ್ದೇನೆ, ರೋಮಾಂಚನಗೊಂಡಿದ್ದೇನೆ. ಸ್ವರ್ಗದ ಅನುಭವ ವಾಗಬೇಕಾದರೆ ಭಾರತವನ್ನು ಸುತ್ತಾಡಿ ಎಂದಷ್ಟೇ ಹೇಳಬಲ್ಲೆ.
ಡಾ. ಹರ್ಷಾ ಕಾಮತ್