ಕಾರ್ಕಳ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ ಉಡುಪಿ, ಯುವಕ ಮಂಡಲ (ರಿ.) ಸಾಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಮಾಹಿತಿ ಕಾರ್ಯಾಗಾರ ಶನಿವಾರ ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು ಇಲ್ಲಿ ನಡೆಯಿತು.
ಕಾರ್ಯಾಗಾರವನ್ನು ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾದ ಯುವರಾಜ್ ಜೈನ್ ಉದ್ಘಾಟಿಸಿದರು. ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಚೇತಾ ಕಾಮತ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಕುಮಾರ್, ಶಂಕರ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಸ್ವಉದ್ಯೋಗ ವಿಷಯದ ಕುರಿತು ಉಡುಪಿ ಸಮೂಹ ಸಂಸ್ಥೆ ಮಣಿಪಾಲ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ವಿಶೇಷ ಉಪನ್ಯಾಸ ನೀಡಿದರು. ಪಿಯುಸಿ ನಂತರ ಮುಂದೇನು ಎಂಬ ವಿಷಯದ ಕುರಿತು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಮನಃಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಚಂದ್ರಕಾಂತ ಗೋರೆ ಮಾತನಾಡಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು.
ಮಂಡಲದ ಮಾಜಿ ಅಧ್ಯಕ್ಷರುಗಳಾದ ದೇವಾನಂದ್ ಶೆಟ್ಟಿ, ಪ್ರಕಾಶ್ ಮಡಿವಾಳ, ಸದಸ್ಯರಾದ ಅನಿಲ್ ಕೋಟ್ಯಾನ್, ಸೀತಾರಾಮ್, ಕಾಲೇಜಿನ ಉಪನ್ಯಾಸಕರು, ನೆಹರು ಯುವ ಕೇಂದ್ರದ ವರ್ಷಿತಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ರಾಜೇಶ್ ಪೂಜಾರಿ ವಂದನಾರ್ಪಣೆಗೈದರು. ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು.