ಕೋಟ: ತನ್ನನ್ನು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅದರಲ್ಲಿ ಏನು ಸಾಧನೆ ಮಾಡಬಹುದು ಎನ್ನುವುದಕ್ಕೆ ನರೇಂದ್ರ ಕುಮಾರ್ ಅವರು ಮಾದರಿ. ಶಿಕ್ಷಕ ವೃತ್ತಿ ಜೊತೆಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅದರಲ್ಲಿ ಹೊಸತನದ ಹೆಜ್ಜೆ ಇದ್ದು ಕಾರ್ಯಕ್ರಮದ ಬಹುರೂಪಿ ಪದಕ್ಕೆ ಇವರೇ ನಿದರ್ಶನ ವ್ಯಕ್ತಿ ಎಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ಅವರು ಹೇಳಿದರು.
ಅವರು ನರೇಂದ್ರ ಕುಮಾರ್ ಕೋಟ ಸಾರ್ವಜನಿಕ ಅಭಿನಂದನಾ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿಕ್ಷಕ ಶ್ರೀ ನರೇಂದ್ರ ಕುಮಾರ್ ಕೋಟ ಇವರ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಬಹುರೂಪಿ-2021 (ಹೊಸತನದ ಕಂಪನ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರಂತ ಥೀಮ್ ಪಾರ್ಕ್ ಚಟುವಟಿಕೆ ಹಿಂದಿನ ಶಕ್ತಿ: ಸಚಿವ ಕೋಟ
ಕಾರಂತ ಥೀಮ್ ಪಾರ್ಕ್ನಲ್ಲಿ ಕಾರಂತರ ನೆನಪು, ಅವರ ಬದುಕಿನ ಚಿತ್ರಣವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಸ್ಥಾಪನೆಯಾಗಿ ದಿನನಿತ್ಯ ಎಂಬಂತೆ ಚಟುವಟಿಕೆ ನಡೆಯುತ್ತಿರುವುದಕ್ಕೆ ನರೇಂದ್ರ ಕುಮಾರ್ ಕಾರಣ. ಇಂದು ಜಿಲ್ಲಾ ರಾಜ್ಯ ಮಟ್ಟದಲ್ಲಿ ಕಾರಂತ ಥೀಮ್ ಪಾರ್ಕ್ ತನ್ನದೇ ವೈಶಿಷ್ಟದೊಂದಿಗೆ ಬೆಳೆದು ನಿರ್ಮಾಣದ ಸಾರ್ಥಕತೆ ಕಂಡುಕೊಳ್ಳುತ್ತಿದೆ, ಇದಕ್ಕೆ ಇವರ ಬಹುಪಾಲು ಶ್ರಮಿವಿದೆ ಎಂದು ಆಡಿಯೋ ಮೂಲಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.
ಅರ್ಹ ವ್ಯಕ್ತಿಗೆ ಪ್ರಶಸ್ತಿ ನೀಡಿದಾಗ ಪ್ರಶಸ್ತಿ ಮೌಲ್ಯ ಹೆಚ್ಚಳ: ಡಾ.ಅಶೋಕ್ ಕಾಮತ್
ಅರ್ಹ ವ್ಯಕ್ತಿಗಳಿಗೆ ಸಲ್ಲಬೇಕಾದ ಪ್ರಶಸ್ತಿ ಸಲ್ಲಿದಾಗ ಆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ನರೆಂದ್ರ ಕುಮಾರ್ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುವುದು ಅವರ ಆರ್ಹತೆಗೆ ಸಂದ ಪ್ರಶಸ್ತಿ, ಇನ್ನಷ್ಟೂ ಸಾಧನೆಯತ್ತಾ ಹೆಜ್ಜೆಗಳು ಅವರ ಬದುಕಿನಲ್ಲಿ ಸಾಗಲಿ ಎಂದು ಡಯಟ್ ಉಡುಪಿ ಹಿರಿಯ ಉಪನ್ಯಾಸಕ ಡಾ.ಅಶೋಕ್ ಕಾಮತ್ ಅವರು ಹೇಳಿದರು.
ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಲಿ: ಆನಂದ್ ಸಿ ಕುಂದರ್
ನರೇಂದ್ರ ಕುಮಾರ್ ಅವರು ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಪ್ರತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ನಿರ್ಮಿಸಿದವರು. ಥೀಮ್ ಪಾರ್ಕ್ನ ಬೆಳವಣಿಗೆಯಲ್ಲಿ ಅವರ ಪಾತ್ರ ಅಮೋಘವಾದದ್ದು, ಅವರಿಗೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆನಂದ ಸಿ ಕುಂದರ್ ಅವರು ಹೇಳಿದರು.
ಕನಸು ಏಕಾಂತ, ಸಹಕಾರದಿಂದ ನನಸು: ನರೇಂದ್ರ ಕುಮಾರ್ ಕೋಟ
ಬದುಕಿನಲ್ಲಿ ಎಲ್ಲರೂ ಕನಸನ್ನು ಕಾಣುತ್ತಾರೆ, ಆ ಕನಸಿಗೆ ಬಣ್ಣ ತುಂಬುವ ಹೃದಯವಂತರಿಂದ ಕನಸು ನನಸಾಗಲು, ನನ್ನ ಬದುಕಿನ ಪ್ರತಿಯೊಂದು ಹೆಜ್ಜೆ-ಹೆಜ್ಜೆಯಲ್ಲೂ ಜೊತೆಗಿದ್ದು ಸಹಕಾರ ನೀಡಿದ ಪ್ರತಿಯೊಬ್ಬರ ಪ್ರೀತಿಗೆ ಚಿರಋಣಿ, ಸಂಘ ಸಂಸ್ಥೆಗಳ ಪ್ರೋತ್ಸಾಹಕ್ಕೆ ಶರಣು ಎಂದು ಸನ್ಮಾನ ಪ್ರಶಸ್ತಿ ಸ್ವೀಕರಿಸಿ ನರೇಂದ್ರ ಕುಮಾರ್ ಕೋಟ ಅವರು ಮಾತನಾಡಿದರು.
ಸ್ಥಳೀಯ 37 ಸಂಘ-ಸಂಸ್ಥೆಗಳು ಗೌರವಿಸಿದ್ದು ವಿಶೇಷವಾಗಿತ್ತು. ಅಲ್ಲದೇ ನೀಲಾವರ ಸುರೇಂದ್ರ ಅಡಿಗರವರ ನರೇಂದ್ರ ಕುಮಾರ್ ಕೋಟ ಅವರ ಕುರಿತಾದ ಅಭಿನಂದನಾ ಗ್ರಂಥ ಸಾಂಗತ್ಯ ರಕ್ಷ ಕವಚ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜಿ.ಸಂಜೀವ್ ಪರಿಚಯ ನುಡಿಗಳನ್ನಾಡಿ, ಪ್ರೌಢಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಡುಪಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ವಿಠ್ಠಲ ವಿ ಗಾಂವ್ಕರ್, ಪ್ಲೆಸೆಂಟ್ ಕುಂದಾಪುರ ಮಾಲಕರಾದ ಇಬ್ರಾಹಿಂ ಸಾಹೇಬ್ ಕೋಟ, ವಿ.ಶೈನ್ ಕೋಚಿಂಗ್ ಸೆಂಟರ್ ಸಂಚಾಲಕರಾದ ಹರೀಶ್ ಕುಮಾರ್ ಶೆಟ್ಟಿ, ಯು ಚಾನೆಲ್ ನಿರ್ದೇಶಕ ಪ್ರಸಾದ್ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸ್ವರಾಂಜಲಿ ಕಾರ್ಯಕ್ರಮ ಹಾಗೂ ನಂತರ ಕಲಾದೇಗುಲ ಉಪ್ಪೂರು ಸಂತೆಕಟ್ಟೆ ಇವರಿಂದ ಹಾಸ್ಯಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.