ಮಲ್ಪೆ: ಇಂದು ವಿದ್ಯಾರ್ಥಿಗಳು ಉದ್ಯಮಿಗಳಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಆದರೆ ಈ ಕ್ಷೇತ್ರದ ಬಗ್ಗೆ ಅರಿವಿನ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಬಗ್ಗೆ ತರಬೇತಿ ನೀಡುವುದು ಅತಿ ಅಗತ್ಯ ಎಂದು ಸಿಡಾಕ್‌ನ ಉಪನಿರ್ದೇಶಕರಾದ ಅರವಿಂದ ಡಿ. ಬೆಳ್ಳೆರಿ ಹೇಳಿದರು.
ಅವರು ಕರ್ನಾಟಕ ಉದ್ಯಮಶೀಲತಾ ಕೇಂದ್ರ ಮಂಗಳೂರು ವಲಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇದರ ಉದ್ಯೋಗ ಮಾಹಿತಿ ಘಟಕದ ಸಹಯೋಗದಲ್ಲಿ ನಡೆದ ಉದ್ಯಮಶೀಲತಾ ಅರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಮೃದು ಕೌಶಲ್ಯಗಳ ತರಬೇತುದಾರರಾದ ಡಾ. ಜಯಕಿಶನ್ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಯಮಶೀಲತೆಯಲ್ಲಿ ಕೌಶಲ್ಯಗಳ ಪಾತ್ರವನ್ನು ವಿವರಿಸಿದರು. ಸಿಡಕಾನ್‌ನ ತರಬೇತುದಾರರಾದ ಪ್ರಥ್ವಿರಾಜ್ ನಾಯಕ್ ಅವರು ಸರಕಾರದ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ವಿವರಿಸಿದರು.
ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಉಮೇಶ್ ಪೈ ಸ್ವಾಗತಿಸಿ, ಸಮಾಜಕಾರ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಟಿ. ವಂದಿಸಿದರು. ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಡಾ. ಹೆಚ್.ಕೆ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.