ಕೂರಾಡಿ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೂರಾಡಿ, ಸ್ಪೂರ್ತಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಇವರ ನೇತೃತ್ವದಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಬಿಎಂಎಂ ಪ್ರೌಢಶಾಲಾ ವಠಾರದಲ್ಲಿ ನಡೆಯಿತು. ಪ್ರತಿಷ್ಠಾಪನೆಯ ನಂತರ ಗೋವಿಗಾಗಿ ಮೇವು ಕಾರ್ಯಕ್ರಮದ ಮೂಲಕ ನೀಲಾವರ ಗೋಶಾಲೆಗೆ ಹುಲ್ಲನ್ನು ನೀಡಲಾಯಿತು.
ಕೂರಾಡಿ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಗೋಪಾಲಕೃಷ್ಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಶಕ್ತರಿಗೆ ಸಹಾಯಧನ ನೀಡುವ ನೆರವು ಎನ್ನುವ ವಿಶಿಷ್ಠ ಕಲ್ಪನೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ನೆರೆವೇರಿಸಿ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮ ನೀಡುತ್ತಿರುವ ಕೂರಾಡಿ ಸಾರ್ವಜನಿಕ ಗಣೇಶೋತ್ಸವ ರಾಜ್ಯಕ್ಕೆ ಮಾದರಿ ಎಂದರು. ಗಣೇಶೋತ್ಸವ ಸ್ಥಾಪಕ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, 9 ವರ್ಷಗಳ ಗಣೇಶೋತ್ಸವ ಆಚರಣೆಯ ಯಶಸ್ಸು ಕೂರಾಡಿಯ ಜನತೆ ಹಾಗೂ ಕೂರಾಡಿಯ ಯುವಶಕ್ತಿಗೆ ಸಲ್ಲುತ್ತದೆ ಎಂದರು.
ದಿವ್ಯಾ ಜಯಪ್ರಕಾಶ ಹೆಗ್ಡೆ ನೇತೃತ್ವದ ಟಿಪ್ ಸೆಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ನನ್ನೂರು ಹೇಗಿರಬೇಕು ಅನ್ನುವ ವಿಶೇಷ ಕಾರ್ಯಕ್ರಮ ನಡೆಯಿತು.
ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶೇಖರ್ ಹೆಗ್ಡೆ ಕೂರಾಡಿ ಅಧ್ಯಕ್ಷತೆ ವಹಿಸಿದ್ದರು. ಕೂರಾಡಿ ಹಾಗೂ ಸುತ್ತಮುತ್ತಲಿನ 25 ಮಂದಿಗೆ ಸಹಾಯಧನ ನೀಡಲಾಯಿತು.
ರಾಜ್ಯ ಬಿಜೆಪಿ ಹಿಂದುಗಳ ವರ್ಗಗಳ ಕಾರ್ಯದರ್ಶಿ ವಿಠಲ್ ಪೂಜಾರಿ ಐರೋಡಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ. ಸುರೇಶ್ ಶೆಟ್ಟಿ, ಬಿಎಂಎಂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮೂರ್ತಿರಾವ್, ನಿವ್ರತ್ತ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ,ರಾಮದಾಸ್ ಕೂರಾಡಿ, ಭಜನಾ ಮಂಡಳಿ ಅಧ್ಯಕ್ಷ ರಾಮಚಂದ್ರ ಕೂರಾಡಿ, ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಮರಕಾಲ, ಸ್ಥಳದಾನಿ ರಶ್ಮಿ ಶೆಟ್ಟಿ, ಗಣೇಶ್ ಭಟ್, ಗ್ರಾ.ಪಂ ಸದಸ್ಯೆ ಜಾನಕಿ ಉಪಸ್ಥಿತರಿದ್ದರು.