ಉಡುಪಿ: ಈ ಬಾರಿಯ ಕೋವಿಡ್ ಹಿನ್ನಲೆಯಲ್ಲಿ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ, ಜಿಲ್ಲೆಯಲ್ಲಿ ಸರಳವಾಗಿ, ಸಾರ್ವಜನಿಕರು ಕನಿಷ್ಠ ಸಂಖ್ಯೆಯೊಂದಿಗೆ ಭಕ್ತಿ ಪೂರ್ವಕವಾಗಿ ಗಣೇಶೋತ್ಸವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ವರ್ಚುವಲ್ ಸಭೆಯ ಮೂಲಕ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಆಚರಣೆಯ ಮಾರ್ಗಸೂಚಿ ಅನುಷ್ಠಾನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ 3ನೇ ಅಲೆಯ ನಿಯಂತ್ರಣ ಉದ್ದೇಶದಿಂದ ಸರ್ಕಾರ ನೀಡಿರುವ ಮಾರ್ಗಸೂಚಿಯನ್ವಯ ಗಣೇಶ ಚತುರ್ಥಿ ಆಚರಣೆ ನಡೆಸಬೇಕು. ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಗೊಂದಲ ಇರಬಾರದು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸ್ಥಳೀಯಾಡಳಿಗಳು ಎಲ್ಲಾ ನಿಬಂದನೆಗಳ ಕುರಿತು ಆಯೋಜಕರಿಗೆ ಮನವರಿಕೆ ಮಾಡಬೇಕು ಎಂದರು.
ದೇವಸ್ಥಾನದಲ್ಲಿ ಮತ್ತು ಮನೆಗಳಲ್ಲಿ ಅಥವಾ ಸರ್ಕಾರಿ /ಖಾಸಗಿ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮತ್ತು ಮನೆಯೊಳಗೆ 2 ಅಡಿ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. 20 ಜನರಿಗಿಂತ ಹೆಚ್ಚು ಜನ ಸೇರಬಾರದು. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆಗೆ ಅವಕಾಶವಿಲ್ಲ. ಯಾವುದೇ ಸಾಂಸ್ಕೃತಿಕ , ಸಂಗೀತ ನೃತ್ಯ ಮುಖ್ಯವಾಗಿ ಡಿಜೆ ಕಾರ್ಯಕ್ರಮ ಆಯೋಜನೆ ಇಲ್ಲ. ಪರಿಸರ ಹಾನಿಯಾಗದಂತೆ ಹಬ್ಬದ ಆಚರಣೆ ನಡೆಯಬೇಕು ಎಂದರು.
ಆಯೋಜಕರು ಕೋವಿಡ್ ನೆಗೆಟಿವ್ ವರದಿ ಹಾಗೂ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು. ಮಾರ್ಗಸೂಚಿಗಳ ಉಲ್ಲಂಘನೆ ನಡೆಯದಂತೆ ತಡೆಯಲು ಆಯೋಜಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸಾರ್ವಜನಿಕರು 6 ಅಡಿ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಗುರುತುಗಳನ್ನು ಹಾಕಬೇಕು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನರ್ ಪರೀಕ್ಷೆಯನ್ನೂ ಸಹ ಮಾಡುವುದರೊಂದಿಗೆ, ಮತ್ತಿತರ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವುದು ಸೂಕ್ತ ಎಂದರು.
ಗಣೇಶೋತ್ಸವ ಮಂಡಳಿಗಳ ಮೂಲಕ ಕೋವಿಡ್ ನಿಯಂತ್ರಣ ಕುರಿತಂತೆ ಸ್ಥಳದಲ್ಲಿ ಲಸಿಕೆ ನೀಡುವುದು ಮತ್ತು ಟೆಸ್ಟಿಂಗ್ ನಡೆಸುವುದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಹೆಚ್ಚಿನ ಮಳೆಯಿಂದಾಗಿ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದಲ್ಲಿ, ಕೂಡಲೇ ಸ್ಪಂದಿಸುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ಮಾತನಾಡಿ, ಮಾರ್ಗಸೂಚಿಗಳ ಕುರಿತಂತೆ ಎಲ್ಲಾ ಪಿಡಿಓಗಳಿಗೆ ಸರ್ಕಾರದ ಮಾರ್ಗಸೂಚಿಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾಚಂದ್ರ, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೆಕರ್, ಜಿಲ್ಲೆಯ ಎಲ್ಲಾ ತಹಸೀಲ್ದಾರುಗಳು, ಮತ್ತಿತರರು ಉಪಸ್ಥಿತರಿದ್ದರು.