ಉಡುಪಿ: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಹೈಕೋರ್ಟಿನಲ್ಲಿ ಪ್ರಾರಂಭಗೊಳ್ಳುವ ಸಮಯದಲ್ಲಿಯೇ ರಾಜ್ಯ ಸರಕಾರ ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆಗಾಗಿ ಹೊಸ ಆಯೋಗ ರಚನೆಗೆ ಮುಂದಾಗಿರುವುದು ಚುನಾವಣೆಯನ್ನು ಮುಂದೂಡುವ ಹುನ್ನಾರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪಿಸಿದ್ದಾರೆ.
ಸರಕಾರದ ಈ ನಿರ್ಧಾರಕ್ಕೆ ಹೈಕೋರ್ಟ್ ಅನುಮತಿ ನೀಡಿದಲ್ಲಿ ಪ್ರತ್ಯೇಕ ಆಯೋಗ ರಚನೆಯಾಗಿ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಬಳಿಕ ಮೀಸಲಾತಿ ನಿಗದಿಯಾಗಿ ಚುನಾವಣೆ ನಡೆಸುವಂತಾಗಿದೆ. ಈ ಹಿಂದೆ ಇದ್ದ ಮೀಸಲಾತಿ ನಿಗದಿಪಡಿಸುವ ಚುನಾವಣಾ ಆಯೋಗದ ಅಧಿಕಾರವನ್ನು ಹಿಂಪಡೆದು ಸರಕಾರವೇ ಮೀಸಲು ನಿಗದಿ ಮಾಡುವ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಪುನರ್ ವಿಂಗಡನೆ ಮಾಡುವ ಅಧಿಕಾರವನ್ನು ಸರಕಾರ ಹಿಂಪಡೆಯುವ ನಿರ್ಧಾರದ ಹಿಂದೆ ಚುನಾವಣೆಯನ್ನು ಮುಂದೂಡುವ ಚಿಂತನೆ ಅಡಗಿದೆ.
ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಬಂದ ದಿನದಿಂದಲೂ ಭಿನ್ನಮತದಿಂದ ಹೊರ ಬರಲಾಗದೆ ಟೇಕ್‌ಆಫ್ ಆಗಿರಲಿಲ್ಲ. ಅದರೊಂದಿಗೆ ಕೋವಿಡ್ ನಿರ್ವಹಣೆಯ ವೈಫಲ್ಯವನ್ನು ನೆಪವಾಗಿರಿಸಿ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಪದಚ್ಯುತಿಗೊಳಿಸಿ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಪೀಠದಲ್ಲಿ ಕುಳ್ಳಿರಿಸಿದೆ. ಆದರೂ ಸರಕಾರದಲ್ಲಿ ಗುಂಪುಗಾರಿಕೆ ಹಾಗೂ ಸಚಿವರುಗಳಲ್ಲಿ ಹೊಂದಾಣಿಕೆಯಿಲ್ಲದೆ, ಜನರಲ್ಲಿ ಮತಯಾಚಿಸುವ ಧೈರ್ಯವಿಲ್ಲದೆ ಸರಕಾರ ಚುನಾವಣೆಯನ್ನು ಮುಂದೂಡಲು ನೆಪವನ್ನು ಕಂಡುಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.